ಇಡಿ, ಸಿಬಿಐ ಏಜನ್ಸಿಗಳನ್ನು ಬಿಜೆಪಿ ತನ್ನಿಚ್ಛೆಯಂತೆ ಬಳಸಿಕೊಳ್ಳುತ್ತಿದೆ: ಶರದ್ ಪವಾರ್

Prasthutha|

ಬೆಂಗಳೂರು: ʻದೇಶದ ಐದು ರಾಷ್ಟ್ರೀಯ ಪಕ್ಷಗಳಲ್ಲಿ ಎನ್‌ಸಿಪಿಯೂ ಒಂದಾಗಿದ್ದು, ಉತ್ತರದ ಕೆಲವು ರಾಜ್ಯಗಳಲ್ಲಿ ನಮ್ಮ ಪಕ್ಷ ಪ್ರಬಲವಾಗಿದೆ. ಇದೀಗ ಕರ್ನಾಟಕಕ್ಕೂ ನಮ್ಮ ಪಕ್ಷ ಪಾದಾರ್ಪಣೆ ಮಾಡಿದೆ. ಮುಂಬರುವ ಚುನಾವಣೆಯಲ್ಲಿ  ಎನ್‌ಸಿಪಿ ಪಕ್ಷವು ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಲಿದೆ. ಇದರಿಂದ ಯಾವುದೇ ಪಕ್ಷದ ಜಾತ್ಯಾತೀತ ಅಭ್ಯರ್ಥಿಗಳಿಗೆ ತೊಂದರೆ ಆಗುವುದಿಲ್ಲʼ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ ಹಾಗೂ ಎನ್‌ಸಿಪಿ ಪಕ್ಷದ ರಾಷ್ಟ್ರಾಧ್ಯಕ್ಷ ಶರದ್ ಪವಾರ್ ತಿಳಿಸಿದರು.

- Advertisement -

ಭಾನುವಾರ ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದ ಅವರು, ನಗರದ ಲೀಲಾ ಪ್ಯಾಲೇಸ್ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ʻಕರ್ನಾಟಕದಲ್ಲಿ ಪಕ್ಷದ ಸಂಘಟನೆಯು ನಮ್ಮ ಮುಖ್ಯ ಉದ್ದೇಶವಾಗಿದ್ದು, ರಾಜ್ಯದಲ್ಲಿ ಈಗ ಪಕ್ಷದ ಕಚೇರಿ ಆರಂಭಿಸಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ನಮ್ಮ ಮೊದಲ ಆಧ್ಯತೆಯಾಗಿದ್ದು, ಸೀಮಿತ ಕ್ಷೇತ್ರಗಳಲ್ಲಿ ಎನ್‌ಸಿಪಿ ಸ್ಪರ್ಧೆ ಮಾಡಲಿದೆ. ರಾಜ್ಯದ ವಸ್ತುಸ್ಥಿತಿ ಮತ್ತು ಸಮಸ್ಯೆಗಳನ್ನು ತಿಳಿಯಲು ಶೀಘ್ರದಲ್ಲೇ ಪಕ್ಷದ ವತಿಯಿಂದ ಬೆಂಗಳೂರಿನಿಂದ ಬೆಳಗಾವಿವರೆಗೆ ಒಟ್ಟು 511 ಕಿ.ಮೀ  ಪಾದಯಾತ್ರೆ ಹಮ್ಮಿಕೊಳ್ಳಲಿದ್ದೇವೆʼ ಎಂದು ಪವಾರ್‌ ಹೇಳಿದರು.

ರಾಮನವಮಿಯ ಸಂದರ್ಭದಲ್ಲಿ ಕೋಮು ಗಲಭೆ ಬಗ್ಗೆ ನಾವು ಎಂದೂ ಕೇಳಿರಲಿಲ್ಲ. ಬಿಜೆಪಿ ಮತ್ತು ಅವರ ಸಂಬಂಧಿತ ಸಂಘಟನೆಗಳು ಈ ಗಲಭೆಗಳನ್ನು ಸೃಷ್ಟಿಸಿವೆ ಎಂದು ನೇರವಾಗಿ ಆರೋಪಿಸಿದ ಶರದ್ ಪವಾರ್ ಅವರು, ರಾಜಕೀಯ ಪಕ್ಷಗಳ ಹೊರತಾಗಿ ಯಾವುದೇ ಸಂಘಟನೆ ಸಮಾಜಕ್ಕೆ ಕೆಡುಕು ಮಾಡುತ್ತಿದ್ದರೆ, ಅವುಗಳ ನಿಯಂತ್ರಣ ಅಗತ್ಯ. ಯಾವುದೇ ರಾಜ್ಯ ಅಂಥ ಸಂಘಟನೆಗಳ ಚಟುವಟಿಕೆ ಮೇಲೆ ನಿರ್ಬಂಧ ಹೇರಿದರೆ ಅದಕ್ಕೆ ನನ್ನ ಸಹಮತವಿದೆ ಎಂದು ಪಿಎಫ್ಐ ನಿಷೇಧಿಸುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

- Advertisement -

ʻಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, ಬಿಜೆಪಿಯೇತರ ಮುಖ್ಯಮಂತ್ರಿಗಳನ್ನೊಳಗೊಂಡ ಸಮಾವೇಶ ಆಯೋಜಿಸುವ ಮೂಲಕ ಜಾತ್ಯಾತೀತ ಬಲವನ್ನು ಒಗ್ಗೂಡಿಸುವ ಕುರಿತು ಚರ್ಚಿಸಿರುವುದಾಗಿ ತಿಳಿಸಿದರು. ದೆಹಲಿಯಲ್ಲಿ ಕೆಲವು ಸೆಕ್ಷನ್ ಗಳ ಮೇಲೆ ಚಾರ್ಜ್ ಶೀಟ್ ಹಾಕಲಾಗಿದ್ದು, ಆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕೇಜ್ರಿವಾಲ್ ಅವರ ಹತೋಟಿಯಲ್ಲಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಅನೇಕ ರಾಜ್ಯಗಳಲ್ಲಿ ಇಡಿ, ಸಿಬಿಐನಂತಹ ಏಜನ್ಸಿಗಳನ್ನು ತಮ್ಮಿಚ್ಛೆಯಂತೆ ಬಳಸಿಕೊಳ್ಳಲಾಗಿದೆʼ ಎಂದು ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿದರು.

ನಾವು ಹಂತ ಹಂತವಾಗಿ ಜಾತ್ಯಾತೀತ ಪಕ್ಷಗಳನ್ನು ಒಗ್ಗೂಡಿಸಲು ಚರ್ಚಿಸುತ್ತಿದ್ದೇವೆ. ನಮ್ಮಿಂದ ಕಾಂಗ್ರೆಸ್ ಪಕ್ಷವನ್ನು ಬಹಿಷ್ಕರಿಸಲು ಸಾಧ್ಯವಿಲ್ಲ. ಏನಿದ್ದರೂ ಕಾಂಗ್ರೆಸ್ ಜೊತೆಗೂಡಿಯೇ ನಾವು ಹೆಜ್ಜೆ ಹಾಕುತ್ತೇವೆ. ಜಾತ್ಯಾತೀತ ಪಕ್ಷಗಳಿಂದ ಪ್ರಧಾನಿ ಅಭ್ಯರ್ಥಿ ಆಯ್ಕೆ ಕುರಿತು ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಸಮಾನ ಮನಸ್ಕ ಪಕ್ಷಗಳ ಎಲ್ಲರೂ ಒಂದಾಗಿ ಚರ್ಚಿಸಿ ಈ ಬಗ್ಗೆ ನಿರ್ಧರಿಸುತ್ತೇವೆ ಎಂದು ಶರದ್ ಪವಾರ್ ಸ್ಪಷ್ಟಪಡಿಸಿದರು.

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಸಂಸತ್ತಿನಲ್ಲಿ ನಾನು ಅವರು ಆಗಾಗ ಭೇಟಿ ಮಾಡುತ್ತಲೇ ಇರುತ್ತೇವೆ. ಆದರೆ, ಈ ಬಾರಿ ಭೇಟಿ ಮಾಡಲ್ಲ. ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಖಂಡಿತಾ ಅವರನ್ನು ಭೇಟಿ ಮಾಡುತ್ತೇನೆ ಎಂದು ಉತ್ತರಿಸಿದರು.

ಎನ್‌ಸಿಪಿ ರಾಜ್ಯಾಧ್ಯಕ್ಷ ಶ್ರೀ ಆರ್. ಹರಿ ಮಾತನಾಡಿ, ಮೇ 2ನೇ ವಾರದಲ್ಲಿ ಪಾದಾಯಾತ್ರೆ ಶುರು ಮಾಡಲು ಯೋಚಿಸುತ್ತಿದ್ದೇವೆ. ಉತ್ತರ ಕರ್ನಾಟಕದ ಸಮಸ್ಯೆಗಳನ್ನಿಟ್ಟುಕೊಂಡು ಈ ಪಾದಾಯಾತ್ರೆ ಆಯೋಜಿಸಲಾಗಿದ್ದು,  ಈ ಮೂಲಕ ಹಳ್ಳಿ ಹಳ್ಳಿಯನ್ನು ತಲುಪುವ ಕೆಲಸ ಮಾಡುತ್ತೇವೆ. ಗ್ರಾಮೀಣ ಭಾಗಗಳ ಮನೆಗಳಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿದ್ದು, ಮಹದಾಯಿ ವಿಚಾರದಲ್ಲಿ ನಾವು ಎಂದಿಗೂ ಕರ್ನಾಟಕವನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು. ಪಾದಯಾತ್ರೆ ವೇಳೆ ಪ್ರತಿ ಜಿಲ್ಲೆಯಲ್ಲೂ 5 ರಿಂದ 10 ಸಾವಿರ ಜನ ಸೇರುತ್ತಾರೆ. ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಬೆಂಗಳೂರು ಹೊರತುಪಡಿಸಿ ಪಾದಯಾತ್ರೆ ನಡೆಸುತ್ತೇವೆ ಎಂದು ತಿಳಿಸಿದರು.

Join Whatsapp