ನವದೆಹಲಿ: ವಿಧಾನಸಭೆ ಉಪಚುನಾವಣೆ ಸಂಬಂಧ ಎಐಸಿಸಿ ಈಗಾಗಲೇ ಒಂದು ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸಿದ್ದು, ಮತ್ತೊಂದು ಕ್ಷೇತ್ರದ ಅಭ್ಯರ್ಥಿ ಹೆಸರನ್ನು ನಾವು ಚರ್ಚಿಸಿ ಹೈಕಮಾಂಡ್ ಗೆ ಕಳುಹಿಸುತ್ತೇವೆ. ಕಳೆದ ಬಾರಿ ಪಕ್ಷ ಯಾರಿಗೆ ಟಿಕೆಟ್ ಕೊಟ್ಟಿತ್ತೋ ಅವರು ಚುನಾವಣೆ ನಂತರವೂ ಪಕ್ಷ ಸಂಘಟನೆಗೆ ಶ್ರಮಿಸಿರುತ್ತಾರೆ. ಆದರೆ ಅಭ್ಯರ್ಥಿಯ ಅಂತಿಮ ಆಯ್ಕೆ ಹೈಕಮಾಂಡ್ ಮಾಡುತ್ತದೆ. ಈ ಬಗ್ಗೆ ನಾನು ಬೆಂಗಳೂರಿಗೆ ಮರಳಿದ ನಂತರ ನಾಯಕರ ಜತೆ ಚರ್ಚಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೆಹಲಿಯಲ್ಲಿ ರಾಷ್ಟ್ರೀಯ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ವಿಭಾಗ ಮಟ್ಟದ ನಾಯಕರ ಜತೆ ಚರ್ಚೆ ಮಾಡಬೇಕು ಎಂದಿದ್ದರು. ಅದು ಈಗಾಗಲೇ ಮುಕ್ತಾಯವಾಗಿದೆ. ನಾವು ಕೂಡ ಚರ್ಚೆ ಮಾಡಿ ನಮ್ಮ ಪ್ರಸ್ತಾವನೆ ನೀಡುತ್ತೇವೆ. ಆಯುಧ ಪೂಜೆ ಒಳಗೆ ಪದಾಧಿಕಾರಿಗಳ ಪಟ್ಟಿ ಅಂತಿಮವಾಗಲಿದೆ ಎಂದರು.
ಪದಾಧಿಕಾರಿಗಳ ಆಯ್ಕೆಯನ್ನು ಅದರದೇ ಆದ ಪ್ರಕ್ರಿಯೆ ಮೂಲಕ ಮಾಡಬೇಕು. ಯಾರ ಸಾಮರ್ಥ್ಯ ಏನು? ಯಾರು ಕಾರ್ಯೋನ್ಮುಖರಾಗಿದ್ದಾರೆ? ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ನೋಡಬೇಕು. ಯುವಕರು ಫೀಲ್ಡಲ್ಲಿ ಕೆಲಸ ಮಾಡಬೇಕು. ಅವರಿಗೆ ಹೆಚ್ಚು ಅವಕಾಶ ನೀಡಬೇಕು ಎಂದು ನಮಗೆ ನಿರ್ದೇಶನ ನೀಡಲಾಗಿದೆ. ಪದಾಧಿಕಾರಿಗಳ ಆಯ್ಕೆಯಲ್ಲಿ ಯುವಕರು ಎಂದರೆ ತೀರಾ ಚಿಕ್ಕವರಲ್ಲ, ಅವರಿಗೆ ತಕ್ಕಮಟ್ಟಿಗೆ ಅನುಭವವೂ ಇರಬೇಕು. ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ಯಾರೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಡಿಕೆಶಿ ಹೇಳಿದರು.
ನಾನು ಯಡಿಯೂರಪ್ಪ ಅವರ ಹೇಳಿಕೆ ಗಮನಿಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಕಟೀಲ್ ಅವರು ಕೂಡ ನಮ್ಮಿಂದ 20 ಶಾಸಕರು ಅವರ ಪಕ್ಷಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ನಮ್ಮ ಶಾಸಕರನ್ನು ಸೇರಿಸಿಕೊಳ್ಳಲು ಯಾಕೆ ವಿಳಂಬ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರು 20, 30, 40 ಅಥವಾ 68 ಶಾಸಕರನ್ನೂ ಸೆಳೆಯುವ ಪ್ರಯತ್ನ ಮಾಡಲಿ. ರಾಜಕಾರಣದಲ್ಲಿ ಗುಟ್ಟಿನ ರಾಜಕಾರಣ ಎಲ್ಲರೂ ಮಾಡುತ್ತಾರೆ. ಅದು ಸಹಜ ಎಂದರು.
ಸದ್ಯಕ್ಕೆ ನಾವು ಆಪರೇಷನ್ ಹಸ್ತದ ವಿಚಾರವಾಗಿ ಯೋಚನೆ ಮಾಡಿಲ್ಲ. ಅವರು (ಬಿಜೆಪಿ) ಎಷ್ಟು ಜನರನ್ನು ಕರೆದುಕೊಳ್ಳಬೇಕೋ ಕರೆದುಕೊಳ್ಳಲಿ. ಯಾರೋ ಒಬ್ಬರು 24 ಗಂಟೆಯೊಳಗೆ ಐವರನ್ನು ಕರೆದುಕೊಳ್ಳುತ್ತೇವೆ ಎಂದಿದ್ದರು. ಈಗ ಇವರು 20 ಶಾಸಕರನ್ನು ಕರೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಅಲ್ಲಿಗೆ 25 ಶಾಸಕರಾದರು. ಉಳಿದವರನ್ನು ಏನು ಮಾಡುತ್ತಾರೋ ಗೊತ್ತಿಲ್ಲ. ನನ್ನ ಹಾಗೂ ಸಿದ್ದರಾಮಯ್ಯ ಅವರನ್ನು ಪರಿಗಣಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದೆಲ್ಲವೂ ಮುಗಿಯಲಿ. ಅವರು ಸಿನಿಮಾ ಶೈಲಿಯಲ್ಲಿ ನಂಬರ್ ಹೇಳುತ್ತಾರೆ. ಅವರಿಗೂ ನಮಗೂ ವ್ಯತ್ಯಾಸ ಇರಬೇಕಲ್ಲ. ಹೀಗಾಗಿ ನಾನು ನಂಬರ್ ಗಳ ಬಗ್ಗೆ ಮಾತನಾಡುವುದಿಲ್ಲ.
ನಮ್ಮ ಪಕ್ಷದ ಸಿದ್ಧಾಂತ, ನಾಯಕತ್ವದ ಬಗ್ಗೆ ಯಾರಿಗೆ ನಂಬಿಕೆ ಇದೆಯೋ, ಅವರೆಲ್ಲ ಪಕ್ಷ ಸೇರಲು ಅರ್ಜಿ ಹಾಕಬೇಕು. ಅದನ್ನು ಪರಿಶೀಲಿಸಲು ಒಂದು ಸಮಿತಿ ಇದೆ. ಯಾರೇ ಬಂದರೂ ಬೇಷರತ್ತಾಗಿ ಬೆಂಬಲ ನೀಡಬೇಕು ಎಂದು ಹೇಳಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಸುರೇಶ್ ಗೌಡ ಅವರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ರಾಜಣ್ಣ ಅವರು ನೀಡಿರುವ ಹೇಳಿಕೆ ವಿಚಾರವಾಗಿ ನಾನು ಮಾಹಿತಿ ಪಡೆಯುತ್ತೇನೆ. ಈಗ ಅದರ ಬಗ್ಗೆ ಮಾತನಾಡಿ ರಾಜಣ್ಣ ಹಾಗೂ ಸುರೇಶ್ ಅವರ ಘನತೆಗೆ ಧಕ್ಕೆ ತರುವುದಿಲ್ಲ. ನಾನು 224 ಶಾಸಕರ ಜತೆಗೂ ಮಾತನಾಡುತ್ತೇನೆ. ಯಾರ ಜತೆಗೂ ನನಗೆ ಭಿನ್ನಾಭಿಪ್ರಾಯವಿಲ್ಲ. ಜೆಡಿಎಸ್ ನಿಂದ ಯಾರೆಲ್ಲ ಬರಲು ಸಿದ್ಧರಿದ್ದಾರೆ ಎಂಬ ಮಾಹಿತಿ ಬಹರಂಗಪಡಿಸಲು ಸಾಧ್ಯವಿಲ್ಲ. ರಾಜಕೀಯ ಸಂಪರ್ಕದ ವಿಚಾರ ಮಾಧ್ಯಮಗಳ ಮುಂದೆ ಮಾತನಾಡುವಂತದ್ದಲ್ಲ. ಜೆಡಿಎಸ್ ನದ್ದು ಮಿಷನ್ 123, ಬಿಜೆಪಿಯವರದ್ದು ಮಿಷನ್ 150. ಆದರೆ, ನಮ್ಮದು ಮಿಷನ್ 224 ಎಂದು ಮಾರ್ಮಿಕವಾಗಿ ಹೇಳಿದರು.
ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷವೇ ಒಂದು ಕುಟುಂಬ. ನಮ್ಮ ಕುಟುಂಬದಲ್ಲಿ ಯಾವ ಕಲಹವೂ ಆಗುವುದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಏನು ಹೇಳುತ್ತಾರೋ ಅದೇ ಅಂತಿಮ. ಪಂಜಾಬ್ ವಿಚಾರವಾಗಿ ನಮ್ಮ ರಾಷ್ಟ್ರೀಯ ವಕ್ತಾರರಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದು, ಅವರನ್ನೇ ಕೇಳಬೇಕು. ನಾನು ಎಐಸಿಸಿ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದರೆ ಪಂಜಾಬ್ ವಿಚಾರವಾಗಿ ಮಾತನಾಡಬಹುದಿತ್ತು. ಉತ್ತರ ಭಾರತಕ್ಕೂ ದಕ್ಷಿಣ ಭಾರತದ ರಾಜ್ಯಗಳಿಗೂ ಸಂಸ್ಕೃತಿ, ರಾಜಕಾರಣ ವಿಚಾರಗಳಲ್ಲಿ ವ್ಯತ್ಯಾಸವಿದೆ. ಹೀಗಾಗಿ ಪಂಜಾಬ್ ವಿಚಾರವಾಗಿ ನಾನು ಏನೂ ಹೇಳಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಶಿವಕುಮಾರ್ ಉತ್ತರಿಸಿದರು.