ಹಾನಗಲ್: ಬಿಜೆಪಿಯವರು ಯಾವ ಕಾರಣಕ್ಕೆ ತಮಗೆ ಮತ ನೀಡಿ ಎಂದು ಕೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಯಾಕೆ ಮತ ಹಾಕಬೇಕು ಎಂದು ಅವರೇ ಹೇಳಬೇಕು. ಅದನ್ನು ಬಿಟ್ಟು ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಾನಗಲ್ ನ ಕೊಪ್ಪರಸಿಕೊಪ್ಪ, ಬೆಳಗಾಲಪೇಟದಲ್ಲಿ ಡಿ.ಕೆ. ಶಿವಕುಮಾರ್ ಅವರ ಪ್ರಚಾರ ಭಾಷಣ ಮಾಡಿ, ಎರಡು ವರ್ಷಗಳಿಂದ ನಿಮಗೆ ಟೋಪಿ ಹಾಕುತ್ತಿರುವ ಬಿಜೆಪಿಗೆ ಈಗ ನೀವು ಟೋಪಿ ಹಾಕಬೇಕು. ಎರಡು ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಆದರೆ ಅವರು ಹೇಳಿದ್ದಂತೆ ಅಚ್ಚೇ ದಿನ ಬರಲೇ ಇಲ್ಲ ಎಂದು ಹೇಳಿದರು.
2013 ರಲ್ಲಿ 50 ರು. ಇದ್ದ ಪೆಟ್ರೋಲ್ ಈಗ 110 ರು. ಆಗಿದೆ. ಇದು ಅಚ್ಛೇ ದಿನನಾ? 2014ರಲ್ಲಿ ಅಡುಗೆ ಅನಿಲದ ಸಿಲಿಂಡರ್ 410 ರು. ಇತ್ತು. ಈಗ ಅದು 980 ರು. ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ರು. ಇತ್ತು. ಈಗ 200 ರು. ಆಗಿದೆ. ಮೋದಿ ಅವರು ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಇದು ಈ ಚುನಾವಣೆಯ ಪ್ರಶ್ನೆ ಎಂದು ಡಿಕೆಶಿ ಹೇಳಿದರು.
ದಿನನಿತ್ಯ ನಿಮ್ಮ ಜೇಬನ್ನು ಬಿಜೆಪಿ ಸರ್ಕಾರ ಪಿಕ್ ಪಾಕೆಟ್ ಮಾಡುತ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೂ ತಲಾ 15 ಲಕ್ಷ ರು. ಹಣ ಹಾಕುತ್ತೇವೆ ಎಂದಿದ್ದರು. ಅದಕ್ಕಾಗಿ ನಿಮ್ಮ ಖಾತೆ ತೆರೆಯಿರಿ ಎಂದರು. ಅವರು ಹಣ ಹಾಕಿದರಾ? ಯಾರಿಗಾದರೂ ಹಣ ಬಂತಾ? ಯುವಕರಿಗೆ ಕೆಲಸ ಸಿಕ್ಕಿತಾ? ಯಾವುದಾದದರರೂ ಫ್ಯಾಕ್ಟರಿ ನಿರ್ಮಾಣ ಮಾಡಿದರಾ? ಎಂದು ಪ್ರಶ್ನಿಸಿದರು.
ನಮಗೆ ಜಾತಿ, ಧರ್ಮ ಬೇಡ. ನೀತಿ ಬೇಕು. ಪ್ರಜಾಪ್ರಭುತ್ವದಲ್ಲಿ ನೀವು ಮತದಾರರು ತೀರ್ಮಾನ ಮಾಡುವವರು. ಕಳೆದ ಚುನಾವಣೆಯಲ್ಲಿ ಮಾನೆ 5 ಸಾವಿರ ಮತಗಳಿಂದ ಸೋತಿದ್ದರು, ನಾವು ಅದನ್ನು ಒಪ್ಪಿದ್ದೇವೆ. ನೀವು ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ನಿಮಗೆ ಏನಾದರೂ ಸಹಾಯ ಆಗಬೇಕಿತ್ತಲ್ಲವೇ? ಯಾರಿಗಾದರೂ ಮನೆ ಕಟ್ಟಿಸಿಕೊಟ್ಟರಾ? ಇಲ್ಲ. ಕೇವಲ ಜಾತಿ-ಧರ್ಮದ ಬಗ್ಗೆ ಮಾತಾಡಿ, ಸಮಾಜದ ಶಾಂತಿ ಕೆಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊನ್ನೆ ಆಯುಧಪೂಜೆ ಹಬ್ಬದ ಸಂದರ್ಭದಲ್ಲಿ ಪೊಲೀಸರು ಖಾಕಿ ಬಟ್ಟೆ ತೆಗೆದುಹಾಕಿ ಕೇಸರಿ ಬಟ್ಟೆ ಧರಿಸಿದ್ದಾರೆ. ಸಂವಿಧಾನ ನಿಮಗೆ ಖಾಕಿ ಬಟ್ಟೆ, ಅಧಿಕಾರ ಕೊಟ್ಟಿದೆ. ಅದನ್ನು ಹಾಕಿಕೊಂಡು ರಾಷ್ಟ್ರಧ್ವಜಕ್ಕೆ ಸೇವೆ ಮಾಡಿ. ನಿಮ್ಮ ನಿಷ್ಠೆ ಹಾಗೂ ಸೆಲ್ಯೂಟ್ ರಾಷ್ಟ್ರಕ್ಕೆ ಇರಬೇಕೇ ಹೊರತು ಸಂಘ-ಪರಿವಾರಕ್ಕೆ ಅಲ್ಲ. ಚುನಾವಣೆ ಮುಗಿಯಲಿ, ಪೊಲೀಸ್ ಠಾಣೆ ಮುಂದೆ ಹೋಗಿ ಧರಣಿ ಮಾಡುತ್ತೇವೆ. ನಮ್ಮ ಸಂವಿಧಾನ ರಕ್ಷಣೆಗೆ ಶ್ರಮಿಸುತ್ತೇವೆ.
ಹುಬ್ಬಳ್ಳಿಯಲ್ಲಿ ಚರ್ಚ್ ಒಳಗೆ ನುಗ್ಗಿ ಭಜನೆ ಮಾಡಿದ್ದಾರೆ. ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ದೇವನೊಬ್ಬ ನಾಮ ಹಲವು. ಇದು ಕಾಂಗ್ರೆಸ್ ಪಕ್ಷದ ಸಿದ್ದಾಂತ. ಆದರೆ ಪೊಲೀಸ್, ಸರ್ಕಾರ ಏನು ಮಾಡುತ್ತಿದೆ? ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ. ಮುಖ್ಯಮಂತ್ರಿಗಳು ಇದನ್ನು ಬೆಂಬಲಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಶಾಂತಿ ಕದಡುವುದಕ್ಕೆ ನೀವು ಬೆಂಬಲವಾಗಿ ನಿಂತು, ಇತಿಹಾಸದಲ್ಲಿ ಕೆಟ್ಟ ಉದಾಹರಣೆಯಾಗುತ್ತಿದ್ದೀರಿ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಕೆಟ್ಟ ಸಂಪ್ರದಾಯಕ್ಕೆ ನೀವು ಸಾಕ್ಷಿಯಾಗುತ್ತಿದ್ದು ಇದು ಒಳ್ಳೆಯದಲ್ಲ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಎಲ್ಲ ಧರ್ಮಗಳನ್ನು ರಕ್ಷಣೆ ಮಾಡುವ ಕರ್ತವ್ಯ ನಮ್ಮದಾಗಿದೆ. ಬಿಜೆಪಿ ಸರ್ಕಾರ ಚುನಾವಣೆ ಸಮಯದಲ್ಲಿ ಕೋಮುಗಲಭೆ ನಡೆಸುತ್ತದೆ. ಯಾರ ಹಸಿವನ್ನಾದರೂ ಇವರು ನೀಗಿಸಿದ್ದಾರಾ? ಬಿಜೆಪಿಯವರು ಸೋಲಿನ ಭೀತಿಯಿಂದ ಈ ರೀತಿ ಬೇರೆ ವಿಚಾರಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ವರದಿ ಹೋಗಿದ್ದೆ ತಡ ಎಲ್ಲ ಮಂತ್ರಿಗಳನ್ನು ಈ ಕ್ಷೇತ್ರಗಳಿಗೆ ದುಡ್ಡು ಕೊಟ್ಟು ಕಳಿಸಿ, ಹಂಚಲು ಹೇಳಿದ್ದಾರೆ. ಪ್ರತಿ ಮತಕ್ಕೆ 2 ಸಾವಿರ ರು. ಹಂಚುತ್ತಿದ್ದಾರೆ. ಅವರು ನಿಮಗೂ ನೀಡುತ್ತಾರೆ. ಅವರ ನೋಟು ತೆಗೆದುಕೊಳ್ಳಿ. ಅದು ನಿಮ್ಮ ಹಣ. ಆ ನೋಟು ತೆಗೆದುಕೊಂಡು ನೀವು ಕಾಂಗ್ರೆಸ್ ಗೆ ಮತ ಹಾಕಬೇಕು ಎಂದು ಸಲಹೆ ನೀಡಿದರು.