ಜನರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿರುವ ಸರ್ಕಾರ, ಲಾಕ್ಡೌನ್ ಅವಧಿಯಲ್ಲಿ ಮದ್ಯ ಮಾರಾಟದಿಂದ ದಾಖಲೆಯ ಆದಾಯ ಗಳಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
“ಎಲ್ಲ ರೀತಿಯಿಂದಲೂ ಈ ಸರ್ಕಾರ ವಿಫಲವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮದ್ಯ ಮಾರಾಟದಿಂದ 3,650 ಕೋಟಿ ರೂಪಾಯಿ ಅಬಕಾರಿ ಆದಾಯ ಗಳಿಕೆಯಾಗಿದ್ದು, ಕಳೆದ ವರ್ಷ 1,404.08 ಕೋಟಿ ಆದಾಯ ಗಳಿಸಲಾಗಿತ್ತು. ಖಜಾನೆಯಲ್ಲಿ ಸಾಕಷ್ಟು ಹಣವಿದ್ದರೂ ಜನರಿಗೆ ಲಸಿಕೆ ಒದಗಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ.” ಎಂದು ಮಂಡ್ಯದಲ್ಲಿ ಮಾಧ್ಯಮಗಳೊಡನೆ ಮಾತನಾಡುವ ವೇಳೆ ಡಿ.ಕೆ ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿರುವ ಕೋವಿಡ್ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲು ಕೆಪಿಸಿಸಿ ಅಧ್ಯಕ್ಷರು ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 2 ದಿನಗಳ ಪ್ರವಾಸ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷವು ಲಸಿಕೆಗಳನ್ನು ನೇರವಾಗಿ ಖರೀದಿಸಿ, ವಿತರಿಸಲು ಸರ್ಕಾರವು ಅನುಮತಿ ನೀಡಬೇಕು. ಯೋಜನೆ ಹಾಗೂ ಸಂಪನ್ಮೂಲಗಳನ್ನು ಹೊಂದಿಸಿಕೊಂಡುರಾಜ್ಯಾದ್ಯಂತ ಲಸಿಕಾ ಅಭಿಯಾನ ನಡೆಸಲು ನಾವು ಸಿದ್ಧರಿದ್ದೇವೆ. ಈಗಾಗಲೇ ನಾವು 100 ಕೋಟಿಯನ್ನು ತೆಗೆದಿರಿಸಿದ್ದೇವೆ. ಬಿಜೆಪಿಗಿಂತಲೂ ಉತ್ತಮವಾಗಿ ಲಸಿಕಾ ಅಭಿಯಾನ ನಡೆಸುವ ಆತ್ಮವಿಶ್ವಾಸ ನಮ್ಮಲ್ಲಿದೆ” ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ತಮ್ಮ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರವೇ ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸರ್ಕಾರವು ರೈತರನ್ನು ಸಾವಿನ ದವಡೆಗೆ ದೂಡುತ್ತಿದೆ. ರೈತರಿಗೆ ಅತಿಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರುವ ಪರಿಸ್ಥಿತಿ ಉಂಟಾಗಿದೆ. ಅವರಿಗೆ ಸಿಗುತ್ತಿರುವ ಬೆಲೆ ಅತ್ಯಂತ ಕಡಿಮೆ ಮತ್ತು ಅಸಮರ್ಪಕವಾದದ್ದು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಕೋವಿಡ್ನಿಂದ ಸಂಕಷ್ಟಕ್ಕೊಳಗಾದ ರೈತರು, ಕಾರ್ಮಿಕರು ಮತ್ತು ಸಮಾಜದ ಎಲ್ಲ ವರ್ಗಗಳಿಗೆ ಕಾಂಗ್ರೆಸ್ ಬೆಂಬಲ ನೀಡಿ, ಅವರೊಡನೆ ಯಾವತ್ತೂ ಇರುತ್ತದೆ ಎಂದು ಅವರು ಹೇಳಿದರು.
ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ರೇಶನ್ ಕಿಟ್ ಗಳನ್ನು ವಿತರಿಸಿ, ಆಂಬ್ಯುಲನ್ಸ್ ಸೇವೆಗೆ ಚಾಲನೆ ನೀಡಿದರು. ಕೋವಿಡ್ ಪರಿಸ್ಥಿತಿಯ ಅವಲೋಕನಕ್ಕಾಗಿ, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸಲು, ಯುವ ಘಟಕ, ಮಹಿಳಾ ಘಟಕ, ರೈತ ಘಟಕ ಮತ್ತು ಸೇವಾ ದಳದ ಕಾರ್ಯಗಳನ್ನು ಉತ್ತೇಜಿಸಲು ಕೆಪಿಸಿಸಿ ಅಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.