ಹೃದಯಹೀನ ಸರಕಾರ

Prasthutha|

ಕೊರೋನಾ ಎರಡನೇ ಅಲೆಯ ಒಂದನೇ ಲಾಕ್‌ ಡೌನ್ ಮುಗಿದು ಇನ್ನೇನು ಎರಡನೇ ಹಂತದ ಲಾಕ್‌ ಡೌನ್‌ ಗೆ ರಾಜ್ಯದ ಜನತೆ ಮಾನಸಿಕವಾಗಿ ಸಿದ್ಧಗೊಳ್ಳುತ್ತಿದ್ದಾರೆ. ಈ ಹಿಂದೆಯೇ ಆರೋಗ್ಯ ತಜ್ಞರು ಎರಡನೇ ಅಲೆಯ ಬಗ್ಗೆ ಎಚ್ಚರಿಸಿದ್ದರೂ ಕೇಂದ್ರವು ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಗೂ ಆ ಭಯ ನಿಜವಾಯಿತು. ಕೋವಿಡ್ ದ್ವಿತೀಯ ಅಲೆ ಸುನಾಮಿಯಂತೆ ಅಪ್ಪಳಿಸಿದಾಗ ಒಂದೇ ಸಮನೆ ಸಾವಿನ ಪ್ರಮಾಣ ಹೆಚ್ಚಳ ಕಂಡಿತು. ಗೌರವದಿಂದ ಬದುಕುವ ವಾತಾವರಣವನ್ನು ಒದಗಿಸಲು ಯೋಗ್ಯತೆ ಇಲ್ಲದ ಸರಕಾರ ಇತ್ತ ಘನತೆಯ ಸಾವಿಗೂ ಅನುವು ಮಾಡಿಕೊಡಲಿಲ್ಲ. ದೇಶಾದ್ಯಂತ ಪ್ರಾಣವಾಯುವಿಗಾಗಿ ಹಪಹಪಿಸಿದ ಜೀವಗಳು ಹಾದಿ ಬೀದಿಗಳಲ್ಲಿ, ವಾಹನಗಳಲ್ಲಿ ಚಡಪಡಿಸಿ ದಾರುಣವಾಗಿ ಮರಣ ಮುಖವನ್ನು ಕಂಡವು. ಅತ್ತ ಗಂಗೆಯಲ್ಲಿ ಕೊರೊನಾ ಸಾವು ನದಿಯಾಗಿ ಹರಿಯಿತು. ನದೀ ದಡದಲ್ಲಿ ಹೂತ ಶವಗಳು ನರಿ ನಾಯಿ ಪಾಲಾಯಿತು. ಈ ಭೀಕರ ದೃಶ್ಯವನ್ನು ಕಂಡ ನಂತರವೂ ನಮ್ಮನ್ನಾಳುವ ಪ್ರಭುಗಳಿಗೆ ಒಂದಿನಿತಾದರೂ ಮನಃಸಾಕ್ಷಿಯಿದ್ದರೆ ನಂತರ ಅವರು ತಮ್ಮ ಅಧಿಕಾರದಲ್ಲಿ ಮುಂದುವರಿಯಲಾರರು.

- Advertisement -

ಜಗತ್ತಿನ ರಾಷ್ಟ್ರಗಳು ಸೋಂಕಿನ ವಿರುದ್ಧ ಯೋಜನಾಬದ್ಧವಾಗಿ ಹೋರಾಡುವಾಗ ಭಾರತವಂತೂ ಜಗತ್ತಿನ ಮುಂದೆ ಅತ್ಯಂತ ಕೆಟ್ಟದಾಗಿ ಕೋವಿಡ್ ನಿರ್ವಹಣೆಯನ್ನು ಮಾಡಿ ಮಾನಕಳೆದುಕೊಂಡಿತು. ಈ ಮಧ್ಯೆ ಸೆಗಣಿಯಲ್ಲಿ ಮಿಂದು ಕೊರೋನಾ ವಿರುದ್ಧ ಹೋರಾಡುವ ‘ಸಂಘ’ಗಳನ್ನು ನೋಡಿ ಜಗತ್ತು ಗೇಲಿ ಮಾಡುತ್ತಿದೆ. ಕಳೆದ ಬಾರಿ ತಟ್ಟೆ, ತಮಟೆ, ಜಾಗಟೆಯಿಂದ ಕೊರೊನಾವನ್ನು ಓಡಿಸಲು ಖುದ್ದು ಪ್ರಧಾನ ಮಂತ್ರಿಯೇ ಆದೇಶಿಸಿದರು. ಈ ಮಧ್ಯೆ ಬಾಬಾ ರಾಮ್‌ ದೇವ್ ಅವರು ಅಲೋಪಥಿ ವೈದ್ಯ ಪದ್ಧತಿಯ ವಿರುದ್ಧ  ಹೇಳಿಕೆಗಳನ್ನು ನೀಡಿ ಕೊನೆಗೆ ಕ್ಷಮೆಯಾಚನೆ ಮಾಡಬೇಕಾಗಿ ಬಂತು. ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿದ ಸರಕಾರವು ಒಂದನೇಯದಾಗಿ ಲಸಿಕೆಯನ್ನು ಯಥೇಚ್ಛವಾಗಿ ವಿದೇಶಗಳಿಗೆ ಮಾರಾಟ ಮಾಡಿತು. ಇದೀಗ ಎರಡನೇ ಅಲೆ ತಾಂಡವವಾಡುವ ವೇಳೆ ಲಸಿಕೆಯ ಉತ್ಪಾದನೆಯ ಕೊರತೆಯ ಬಗ್ಗೆ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ. 138 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಕೇಂದ್ರವು ಅದೆಷ್ಟು ದೊಡ್ಡ ಪೂರ್ವ ತಯಾರಿಯನ್ನು ಮಾಡಬೇಕಿತ್ತು. ಆದರೆ ಪ್ರಧಾನಿ ಸಹಿತ ಬಿಜೆಪಿ ನಾಯಕರು ಸೆಂಟ್ರಲ್ ವಿಸ್ಟಾ, ಚುನಾವಣೆಯ ಬಗ್ಗೆ ಬ್ಯುಸಿಯಾಗಿದ್ದರು. ಮಾತ್ರವಲ್ಲ ಬಂಗಾಳದ ಚುನಾವಣಾ ರ್ಯಾಲಿಯ ಜನಸ್ತೋಮವನ್ನು ನೋಡಿ ಮೋದಿ ರೋಮಾಂಚನಗೊಂಡಿದ್ದರು!

ಇತ್ತ ತನ್ನ ಪಾಲಿನ ಆಮ್ಲಜನಕವನ್ನು ಕೇಳದೆ ಕರ್ನಾಟಕದ ಬಿಜೆಪಿ ಸರಕಾರ ಬಾಯಿ ಮುಚ್ಚಿ ಕುಳಿತಾಗ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗಿ ಬಂತು. ಕೊನೆಗೆ ನ್ಯಾಯಾಲಯದ ಆಜ್ಞಾಪನೆಯ ನಂತರವೂ ಮನಸ್ಸಾಕ್ಷಿ ಸತ್ತು ಹೋದ ಕೇಂದ್ರವು ಕರ್ನಾಟಕದ ಪಾಲಿನ 1200 ಮೆಟ್ರಿಕ್ ಟನ್ ಆಮ್ಲಜನಕ ಬದಲಿಗೆ ಅದರ ಅರ್ಧದಷ್ಟು ಆಮ್ಲಜಕನವೂ ಪೂರೈಕೆ ಮಾಡಲಿಲ್ಲ. ದೇಶದ ಜನರಿಗೆ ಸದಾ ಉಪದೇಶ ನೀಡುವ ಪ್ರಧಾನಿ, ಪೌರರು ತರಗೆಲೆಯಂತೆ ಸಾವನ್ನಪ್ಪುವ ವೇಳೆ ಮಾಡಿದ್ದಾದರೂ ಏನು? ಕೊನೆಗೆ ಜಗತ್ತಿನ ರಾಷ್ಟ್ರಗಳ ಮುಂದೆ ಸಹಾಯಕ್ಕಾಗಿ ದುಂಬಾಲು ಬಿದ್ದಾಗ ಪಾಕ್, ಬಾಂಗ್ಲಾ, ಯುರೋಪ್, ಅರಬ್ ರಾಷ್ಟ್ರಗಳಾದಿ ಸಹಾಯಕ್ಕೆ ಮುಂದೆ ಬಂದವು. ಆದರೆ ಇಚ್ಛಾಶಕ್ತಿಯಿಲ್ಲದ ಭ್ರಷ್ಟ ಸರಕಾರದ ಮುಂದೆ ಕೊರೋನಾ ವಿಜ್ರಂಭಿಸಿತು. ದೇಶಾದ್ಯಂತ ಇರುವ ಎನ್‌ ಜಿಒಗಳು, ಸಂಘಸಂಸ್ಥೆಗಳು ತಮ್ಮ ಕೈಲಾದ ಸೇವೆಗಳ ಮೂಲಕ ಮಾನವೀಯತೆ ಇನ್ನೂ ಬಾಕಿಯಿದೆ ಎಂಬುದನ್ನು ತೋರಿಸಿದವು. ಅದೇ ವೇಳೆ ನಾವು ಆರಿಸಿದ ಸರಕಾರಗಳು ಗುರುತರವಾದ ಹೊಣೆಗೇಡಿತನವನ್ನು ಪ್ರದರ್ಶಿಸಿದವು. ಕೊನೆಗೆ ಎಲ್ಲರೂ ನಿರೀಕ್ಷಿಸಿದಂತೆ ಅದೇ ಟಿವಿ ಪರದೆಯ ಮೇಲೆ ಮೊಸಳೆ ಕಣ್ಣೀರು, ಬಿಕ್ಕಳಿಕೆಯ ಅಭಿನಯವನ್ನು ದೇಶದ ಜನತೆ ಕಂಡರು.

- Advertisement -

ಕೇರಳ, ತಮಿಳುನಾಡು, ಆಂಧ್ರ ಸರಕಾರಗಳು ತಂತಮ್ಮ ರಾಜ್ಯದ ಜನತೆಯ ನೋವಿಗೆ ಸ್ಪಂದಿಸಿ ಸಮಾಧಾನಕರ ಪ್ಯಾಕೇಜ್‌ಗಳನ್ನು ಘೋಷಿಸಿದವು. ಕೇವಲ 3.48 ಕೋಟಿ ಜನಸಂಖ್ಯೆಯಿರುವ ನೆರೆಯ ಕೇರಳ 20 ಸಾವಿರ ಕೋಟಿ ರೂಪಾಯಿಯ ಪರಿಹಾರವನ್ನು ಪ್ರಕಟಿಸಿದರೆ, ದುಪ್ಪಟ್ಟು ಜನಸಂಖ್ಯೆಯಿರುವ (7.05 ಕೋಟಿ) ಕರ್ನಾಟಕದ ಜುಜುಬಿ ಪ್ಯಾಕೇಜ್ ಕೇವಲ 1250 ಕೋಟಿ ರೂಪಾಯಿಗಳು. ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ವಿಪಕ್ಷ ಶಾಸಕರನ್ನು ಖರೀದಿಸಲು ಇದೇ ಬಿಜೆಪಿ ಸುರಿಸಿದ್ದು ಕೋಟಿ ಕೋಟಿಗಳು. ಆದರೆ ಜನರು ದುಡಿಮೆಯಿಲ್ಲದೆ ಕಂಗೆಟ್ಟಾಗ, ಹೊಟ್ಟೆಗಿಲ್ಲದೆ ಮನೆಯಲ್ಲೇ ಬಂಧನಕ್ಕೊಳಗಾದಾಗ, ಆಸ್ಪತ್ರೆ, ಬೆಡ್, ಆಮ್ಲಜನಕವಿಲ್ಲದೆ ವಿಲವಿಲ ಒದ್ದಾಡುತ್ತಿರುವಾಗ ಕರ್ನಾಟಕ ಸರಕಾರ ಭಿಕ್ಷೆಯಂತೆ ಪ್ಯಾಕೇಜ್ ಅನ್ನು ಎಸೆಯಿತು. ವಿಪಕ್ಷಗಳ ಜನಸಾಮಾನ್ಯರ ಟೀಕಾವಿಮರ್ಶೆಗಳನ್ನು ಕೇಳಿಸಿಕೊಳ್ಳುವ ಜಾಯಮಾನ ಬಿಜೆಪಿಗೆ ಲಾಗಾಯ್ತಿನಿಂದ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದ್ದರಿಂದಲೇ ಉತ್ತರ ಪ್ರದೇಶದಲ್ಲಿ ಸರ್ಕಾರದ ಅಸಾಮರ್ಥ್ಯದ ಬಗ್ಗೆ ಮಾತನಾಡಿದಾಗ ಸೊತ್ತು ಜಪ್ತಿ ಮಾಡುವ, ರಾಜದ್ರೋಹದ ಕೇಸ್ ಜಡಿಯುವ ಹುಂಬತನವನ್ನು ಯೋಗಿ ಸರಕಾರ ಪ್ರದರ್ಶಿಸಿತು. ಕೊರೊನಾವನ್ನು ಭಾರತ ಸರಕಾರವು ಕೆಟ್ಟದಾಗಿ ನಿರ್ವಹಿಸಿದ್ದನ್ನು ಪ್ರಶ್ನಿಸಿದ ಆಸ್ತ್ರೇಲಿಯಾದ ಮಾಧ್ಯಮವೊಂದಕ್ಕೆ ರಾಯಭಾರಿ ಕಚೇರಿ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು.

ನೋಟ್ ಬ್ಯಾನ್, ಜಿಎಸ್‌ ಟಿ, ಕೊರೊನಾ, ಲಾಕ್‌ ಡೌನ್ ಬೆಲೆಯೇರಿಕೆ ಒಂದರ ಮೇಲೆ ಒಂದರಂತೆ ಸಿಡಿಲಿನಂತೆ ಎರಗಿದಾಗ ದೇಶದ ಆರ್ಥಿಕತೆ ನುಚ್ಚು ನೂರಾಗಿ ಹೋಗಿತ್ತು. ಈ ಮಧ್ಯೆಯೂ ಬದುಕಿನ ಜಟಕಾ ಬಂಡಿಯನ್ನು ಓಡಿಸಲು ಲಕ್ಷಾಂತರ ರೂಪಾಯಿ ಬಂಡವಾಳವನ್ನು ಹಾಕಿದ ವ್ಯಾಪಾರಿಗಳು, ಮೈಮುರಿದು ಹೊಲದಲ್ಲಿ ದುಡಿದ ರೈತರು, ಕೂಲಿಕಾರ್ಮಿಕರು ಎಲ್ಲರ ಬದುಕನ್ನು ಆಳುವ ವರ್ಗ ನಾಶದ ಅಂಚಿಗೆ ತಳ್ಳಿದೆ. ಆರ್ಥಿಕವಾಗಿ ಜರ್ಜರಿತಗೊಂಡ ಜನತೆ ಪರಿಹಾರ ಪ್ಯಾಕೇಜ್ ಕೇಳಿದಾಗ ನಾವೇನು ನೋಟ್ ಪ್ರಿಂಟ್ ಮಾಡಿಸುತ್ತೇವೆಯೇ, ಜನರು ಸತ್ತರೆ ಸಾಯಲಿ, ನಾವೇನು ನೇಣು ಹಾಕಿಕೊಳ್ಳಬೇಕೇ? ನ್ಯಾಯಾಧೀಶರು ಸರ್ವಜ್ಞರೇ? ಇವು ನಮ್ಮ ಕರುನಾಡ ಜನಪ್ರತಿನಿಧಿಗಳು ಉಲಿದ ಮುತ್ತಿನಂಥ ಮಾತುಗಳು!

 ಪೊಲೀಸರ ಕೈಗೆ ಲಾಠಿ ಕೊಟ್ಟು ಬೀದಿಯಲ್ಲಿರುವ ಜನರನ್ನು ಓಡಿಸಿದರೆ ಕೊರೋನಾ ಓಡಿಹೋಗುತ್ತದೆ ಎಂದು ಸರಕಾರ ನಂಬಿಸಲು ಹೊರಟಂತಿದೆ. ಅವೈಜ್ಞಾನಿಕ ಲಾಕ್‌ ಡೌನ್‌ ನಿಂದ ಈಗಾಗಲೇ ಆರ್ಥಿಕವಾಗಿ ಕಂಗೆಟ್ಟ ಜನರ ವಾಹನ ಜಪ್ತಿ, ಜೈಲು ಮೊದಲಾದ ಕಠಿಣ ಕ್ರಮಗಳನ್ನು ಜರಗಿಸಲು ಪೌರುಷ ತೋರುವ ಸರಕಾರ, ಆಹಾರ, ಆಸ್ಪತ್ರೆ, ಬೆಡ್, ಆಮ್ಲಜನಕ, ಲಸಿಕೆ ಮತ್ತು ಪರಿಹಾರ ವಿಚಾರದಲ್ಲಿ ಷಂಡನಂತೆ ವರ್ತಿಸುತ್ತಿರುವುದೇಕೆ? ಈ ವೇಳೆ ‘‘ಜನರನ್ನು ದೇವರೇ ಕಾಪಾಡಬೇಕು’’ ಎಂಬ ನ್ಯಾಯಾಲಯದ ಹೇಳಿಕೆಯಲ್ಲೂ ಸತ್ಯ ಇಲ್ಲ ಎನ್ನುವಂತಿಲ್ಲ.

Join Whatsapp