ಡಿ.ಕೆ. ಶಿವಕುಮಾರ್ – ಮಾಧ್ಯಮ ಪ್ರತಿನಿಧಿಗಳ ನಡುವೆ ಸಂಘರ್ಷ: ಪತ್ರಕರ್ತರಿಂದ ಪತ್ರಿಕಾಗೋಷ್ಠಿ ಬಹಿಷ್ಕಾರ

Prasthutha|

ಬೆಂಗಳೂರು; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಧ್ಯಮ ಪ್ರತಿನಿಧಿಗಳ ನಡುವೆ ಸಂಘರ್ಷ ಆರಂಭವಾಗಿದೆ. ಇದರ ಪರಿಣಾಮ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಮಾಧ್ಯಮ ಗೋಷ್ಠಿಗಳಿಗೆ ಮಾಧ್ಯಮ ಪ್ರತಿನಿಧಿಗಳು ಬಹಿಷ್ಕಾರ ಹಾಕಿದ್ದಾರೆ.

- Advertisement -


ಇಂದು ಅಪರಾಹ್ನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಮಾಧ್ಯಮ ಉಪಾಧ್ಯಕ್ಷ ರಮೇಶ್ ಬಾಬು, ಕೆಪಿಸಿಸಿ ಉಪಾಧ್ಯಕ್ಷ ಪಿ.ಆರ್. ರಮೇಶ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ರಾಮಚಂದ್ರಪ್ಪ ಅವರು ಮಾಧ್ಯಮ ಪ್ರತಿನಿಧಿಗಳಿಲ್ಲದೇ ಖಾಲಿ ಖುರ್ಚಿಗಳ ನಡುವೆ ಸುದ್ದಿಗೋಷ್ಠಿ ನಡೆಸಿದರು. ಕೆಪಿಸಿಸಿ ಸಾಮಾಜಿಕ ಮಾಧ್ಯಮ ಸುದ್ದಿಗೋಷ್ಠಿಯ ನೇರ ಪ್ರಸಾರ ಮಾಡಿದ್ದು, ನಂತರ ಸುದ್ದಿಗೋಷ್ಠಿಯ ಹೇಳಿಕೆ ಬಿಡುಗಡೆ ಮಾಡಿತು.


ಬಹುಶಃ ಖಾಲಿ ಖುರ್ಚಿಗಳ ನಡುವೆ ಸುದ್ದಿಗೋಷ್ಠಿ ನಡೆಸಿದ್ದು, ಅಪರೂಪದ ಪ್ರಸಂಗವಾಗಿದೆ. ಮಾಧ್ಯಮ ಪ್ರತಿನಿಧಿಗಳು ಬಾರದಿದ್ದರೂ ಪರವಾಗಿಲ್ಲ. ತಮ್ಮ ದೈನಂದಿನ ಸುದ್ದಿಗೋಷ್ಠಿ, ಕಾರ್ಯಕ್ರಮಗಳು ನಡೆಯುತ್ತವೆ ಎನ್ನುವ ಸಂದೇಶವನ್ನು ಈ ಮೂಲಕ ಡಿ.ಕೆ. ಶಿವಕುಮಾರ್ ರವಾನಿಸಿದ್ದಾರೆ.

- Advertisement -


ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಒರಟಾಗಿ ನಡೆದುಕೊಳ್ಳುತ್ತಿದ್ದು, ಮಾಧ್ಯಮ ಗೋಷ್ಠಿಗಳಿಗೆ ತಡವಾಗಿ ಬರುತ್ತಿದ್ದರು ಎಂಬ ಆರೋಪ ಕಾಂಗ್ರೆಸ್ ಬೀಟ್ ವರದಿ ಮಾಡುವ ಪತ್ರಕರ್ತರಿಂದ ಕೇಳಿ ಬಂದಿದೆ.
ಡಿ.ಕೆ. ಶಿವಕುಮಾರ್ ನಾಮಪತ್ರ ಸಲ್ಲಿಸಿದ ದಿನ ಸುಮಾರು ಮೂರು ಗಂಟೆ ತಡವಾಗಿ ಬಂದಿದ್ದರು. ಇದಾದ ನಂತರ ಸೋಮವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಗೆ ವಿಳಂಬ ಮಾಡಿದರು. ಆಗ ಇದನ್ನು ಕೆಲವು ಪ್ರತಿನಿಧಿಗಳು ಪ್ರಶ್ನಿಸಿದರು.


ಇದರಿಂದ ಸಿಟ್ಟಿಗೆದ್ದ ಡಿ.ಕೆ. ಶಿವಕುಮಾರ್, “ಚುನಾವಣೆ ಸಮಯದಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು. ಬೇಕೆಂದೇ ಈ ರೀತಿ ವಿಳಂಬ ಮಾಡುವುದಿಲ್ಲ. ಆದರೆ ನೀವು ನನ್ನನ್ನೇ ಬ್ಲಾಕ್ ಮೇಲ್ ಮಾಡುತ್ತಿದ್ದೀರಾ. ಇದು ಸರಿಯಲ್ಲ. ನಿಮಗೆ ಆಸಕ್ತಿ ಇಲ್ಲ ಎಂದ ಮೇಲೆ ನೀವ್ಯಾರು ನಾಳೆಯಿಂದ ಕೆಪಿಸಿಸಿ ಕಚೇರಿಗೆ ಬರಬೇಡಿ” ಎಂದು ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.
ಇದಾದ ನಂತರವೂ ಸಹ ಕೆಲವು ವಿದ್ಯುನ್ಮಾನ ಪ್ರತಿನಿಧಿಗಳು ಡಿ.ಕೆ. ಶಿವಕುಮಾರ್ ಬೈಟ್ ಪಡೆದು ಬಂದಿದ್ದರು. ಇದು ಇನ್ನೂ ಕೆಲವು ಮಾಧ್ಯಮ ಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇಂದು ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳು ಸಭೆ ಸೇರಿ ಕೆಪಿಸಿಸಿ ಕಚೇರಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕೆಪಿಸಿಸಿ ಕಚೇರಿಯಿಂದ ಹೊರಗಡೆ ಬಂದು ಮಾತನಾಡಿದರೆ ಸುದ್ದಿ ಪ್ರಸಾರ ಮಾಡುತ್ತೇವೆ. ಕಚೇರಿ ಒಳಗಡೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ಪರಿಣಾಮ ಅಪರಾಹ್ನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯನ್ನು ಪ್ರತಿನಿಧಿಗಳು ಬಹಿಷ್ಕರಿಸಿದ್ದರು.

Join Whatsapp