ಮಂಗಳೂರು : ಸುರತ್ಕಲ್‌ ಮಿಸ್ಕಿತ್ ಆಸ್ಪತ್ರೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಚ್ಚಿಸಿದ್ದೇಕೆ ?

Prasthutha|

►ಕಳೆದ ಬಾರಿ ಕಡಿಮೆ ದರದಲ್ಲಿ ಕೋವಿಡ್ ಚಿಕಿತ್ಸೆ ನೀಡಿದ್ದ ಆಸ್ಪತ್ರೆ !

- Advertisement -

 ಕಳೆದ ಬಾರಿಯ ಕೋವಿಡ್ ವೇಳೆಯಲ್ಲಿ ಜನ ಸಾಮಾನ್ಯರು ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಷ್ಟ ಅನುಭವಿಸುತ್ತಿದ್ದ ವೇಳೆಯಲ್ಲಿ ಜನರ ಕೈಗೆಟಕುವ ದರದಲ್ಲಿ ಕೋವಿಡ್ ಚಿಕಿತ್ಸೆ ನೀಡಿದ್ದ ಮಂಗಳೂರಿನ ಸುರತ್ಕಲ್ ಪರಿಸರದ ಕಾನ ಎಂಬಲ್ಲಿನ ಮಿಸ್ಕಿತ್ ಆಸ್ಪತ್ರೆಯನ್ನು ಇತ್ತಿಚೆಗೆ ದಕ್ಷಿಣ ಜಿಲ್ಲಾಡಳಿತ ಮುಚ್ಚುಗಡೆ ಮಾಡಿತ್ತು. ಜನರಿಗೆ ಈ ಕುರಿತು ಗೊಂದಲಕ್ಕೊಳಗಾಗಿದ್ದರು.

ಆಸ್ಪತ್ರೆಯನ್ನು ಯಾಕೆ ಮುಚ್ಚಿಸಲಾಯಿತು ?

- Advertisement -

 ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ ಆಯಕ್ಟ್ (ಕೆಪಿಎಂಇಎ ಕಾಯ್ದೆ)ನ್ನು ಉಲ್ಲಂಘಿಸಿದ ಆರೋಪದ ಮೇರೆಗೆ  ಮಿಸ್ಕಿತ್ ಆಸ್ಪತ್ರೆಯನ್ನು ಮುಚ್ಚಿಸಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.  ಈ ಆಸ್ಪತ್ರೆಯಲ್ಲಿನ ಆರ್ಯುವೇದ ವೈದ್ಯರು ಅಲೋಪತಿ ಪದ್ಧತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು ಎನ್ನಲಾಗಿದೆ. ಮಾತ್ರವಲ್ಲ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಕಿಯರು ಕೂಡ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ಮಾನ್ಯತೆ ಪಡೆಯದೆ ಚಿಕಿತ್ಸೆಯನ್ನು ನೀಡುತ್ತಿದ್ದರು ಎಂದೂ ಕೂಡಾ ಅಲ್ಲಿನ ದಾಖಲೆ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ ಎಂದು ದ.ಕ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕೆಪಿಎಂಇಎ ಸಕ್ಷಮ ಪ್ರಾಧಿಕಾರ ಅಧ್ಯಕ್ಷ ಡಾ.ರಾಜೇಂದ್ರ ಕೆ.ವಿ. ಅವರು ತಿಳಿಸಿದ್ದಾರೆ.

 ಮಾ.6ರಿಂದ 8ರವರೆಗೆ ಮಾಧವ ಎಂಬವರ ಪತ್ನಿ ಅಪ್ಪಿ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆ ಸಮಯದಲ್ಲಿ ರೋಗಿಯ ಕೋವಿಡ್ ಪರೀಕ್ಷೆ ನಡೆಸದೆ ರೋಗಿಯ ಚಿಕಿತ್ಸೆಯ ಬಗ್ಗೆ ನಿರ್ಲಕ್ಷ್ಯ ತಾಳಿದ್ದರು ಎನ್ನಲಾಗಿದ್ದು, ಮಾ.18ರಂದು ಅಪ್ಪಿ ಕೋವಿಡ್‌ನಿಂದ ಮೃತಪಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದಾಗ ರೋಗಿಯ ಚಿಕಿತ್ಸೆಯ ಬಗ್ಗೆ ವೈದ್ಯಕೀಯ ನಿರ್ಲಕ್ಷ ತಾಳಿರುವುದು ದಾಖಲೆಗಳಿಂದ ತಿಳಿದು ಬಂದಿದೆ. ಆಯುರ್ವೇದ ಪದ್ಧತಿಯ ವೈದ್ಯರು ಅಲೋಪತಿ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದರಲ್ಲದೆ, ಆಸ್ಪತ್ರೆಯ ಆವರಣದಲ್ಲಿ ಕೆಪಿಎಂಇಎ ನೋಂದಣಿ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವುದು ಕೂಡ ತನಿಖೆಯ ವೇಳೆ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಶೀಲನೆಯ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ 18 ರೋಗಿಗಳಿದ್ದರೂ ಕೂಡ ಕೇಸ್‌ಶೀಟ್‌ನಲ್ಲಿ ಕೇವಲ 9 ಮಂದಿಯನ್ನು ಅಧಿಕೃತವಾಗಿ ದಾಖಲಿಸಿರುವುದು ಕಂಡು ಬಂದಿದೆ. ನಾಲ್ಕು ಮಂದಿಯಲ್ಲಿ ಜ್ವರದ ಲಕ್ಷಣಗಳು ಕಂಡು ಬಂದಿದ್ದು, ಸಾಂಕ್ರಾಮಿಕ ಕಾಯ್ದೆಯನ್ನು ಅನುಸರಿಸದೆ ಉಲ್ಲಂಘಿಸಲಾಗಿದೆ. ಈ ಎಲ್ಲಾ ಕಾರಣಕ್ಕಾಗಿ ಕಳೆದ ಶುಕ್ರವಾರ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಆಸ್ಪತ್ರೆಯ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿದು ಆಸ್ಪತ್ರೆಯನ್ನು ಮುಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದೀಪಾ ಪ್ರಭು, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಕುಮಾರ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ರಹ್ಮಾನ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಅಷ್ಫಾಕ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳಿಪಾಡಿ, ಕೆಪಿಎಂಇಎ ಕಾಯ್ದೆಯ ಕಾನೂನು ಸಲಹೆಗಾರ ಚಂದ್ರಹಾಸ, ಶುಶ್ರೂಷಾಧಿಕಾರಿ ಗುಲ್ಜಾರ್ ಬಾನು ಪಾಲ್ಗೊಂಡಿದ್ದರು.

Join Whatsapp