ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ದ‌.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕರೆ

Prasthutha|

ಮಂಗಳೂರು: ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತದೊಂದಿಗೆ ಶಿಕ್ಷಕರು, ಪೋಷಕರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಕರೆ ನೀಡಿದರು.

- Advertisement -

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಜು.15ರ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ಮುಕ್ತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಡ್ರಗ್ಸ್ ಬಳಕೆ ರೋಗವಿದ್ದಂತೆ. ಡ್ರಗ್ ವ್ಯಸನಿಗಳನ್ನು ಪತ್ತೆ ಹಚ್ಚಿ, ಅವರನ್ನು ಗುಣಪಡಿಸಲು ಚಿಕಿತ್ಸೆಗೆ ಒಳಪಡಿಸಲಾಗುವುದು ಅದಕ್ಕಾಗಿ ಅವರನ್ನು ಕೌನ್ಸೆಲಿಂಗ್‍ಗೆ ಕಳುಹಿಸಲಾಗುವುದು, ಮುಖ್ಯವಾಗಿ ಡ್ರಗ್ ವ್ಯಸನಿಗಳ ವೈಯ್ಯಕ್ತಿಕ ಜೀವನವನ್ನು ಗೌಪ್ಯವಾಗಿರಿಸಲಾಗುವುದು ಎಂದರು.

- Advertisement -

ಈ ಕಾರ್ಯಗಾರ ಒಂದು ದಿನದ ಕಾರ್ಯಕ್ರಮವಲ್ಲ. ಜಿಲ್ಲೆಯಲ್ಲಿ ಡ್ರಗ್ ಪೆಡ್ಲಿಂಗ್ ತಡೆಯಲು ಪೊಲೀಸ್ ಅಧಿಕಾರಿಗಳು ಸತತ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅವರೊಂದಿಗೆ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರ ಪಾತ್ರವೂ ಅತಿ ಮುಖ್ಯವಾದದ್ದು, ಮಕ್ಕಳು ಮನೆಗಿಂತಲೂ ಹೆಚ್ಚಿನ ಸಮಯವನ್ನು ಶಾಲೆ, ಕಾಲೇಜುಗಳಲ್ಲಿ ಕಳೆಯುತ್ತಾರೆ. ಈ ವೇಳೆ ಶಿಕ್ಷಕರು ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳ ಮೇಲೆ ನಿಗಾ ಇಡಬೇಕು ಎಂದು ಸಲಹೆ ನೀಡಿದರು.

ಮಾದಕ ವ್ಯಸನ ಮುಕ್ತ ಜಿಲ್ಲೆಯಾಗಬೇಕು ಎಂಬುದು ಕಾರ್ಯಕ್ರಮದ ಮೂಲ ಉದ್ದೇಶ. ಆಗಸ್ಟ್ 15ಕ್ಕೆ ಡ್ರಗ್ಸ್ ಮುಕ್ತ ದಕ್ಷಿಣ ಕನ್ನಡ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈ ಜೋಡಿಸಬೇಕು. ಜಿಲ್ಲೆಯ ನಾಗರಿಕರು ಕಾರ್ಯದಲ್ಲಿ ಜವಾಬ್ದಾರಿಯುತರಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್, ಮಂಗಳೂರು ನಗರ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ ಎನ್, ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ., ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೆನ್‍ಲಾಕ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಸದಾಶಿವ ಶಾನುಭೋಗ್, ಹಿರಿಯ ಮನೋರೋಗ ತಜ್ಞ ಡಾ. ರವೀಶ್ ತುಂಗಾ ಹಾಗೂ ಲಿಡಿಯೋ ಲೋಬೊ ವೇದಿಕೆಯಲ್ಲಿದ್ದರು.
ವೆನ್ ಲಾಕ್ ಆಸ್ಪತ್ರೆಯ ಮನೋರೋಗ ತಜ್ಞ ಡಾ. ಸುನೀಲಕುಮಾರ್, ಮನೋರೋಗ ತಜ್ಞರಾದ ಡಾ. ಸುಪ್ರಿತಾ ಭಾಗವಹಿಸಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್ ಕುಮಾರ್ ಎಂ ಸ್ವಾಗತಿಸಿದರು. ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿಯಾದ ಡಾ.ಸುದರ್ಶನ್ ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಕಾರ್ಯಕ್ರಮ ನಿರೂಪಿಸಿದರು.

Join Whatsapp