ರಾಜ್ಯದ 25 ಎ ದರ್ಜೆ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ “ದೈವ ಸಂಕಲ್ಪ”ಯೋಜನೆ: ಶಶಿಕಲಾ ಜೊಲ್ಲೆ

Prasthutha|

ಕಾಶಿ ಯಾತ್ರೆಗೆ ಪ್ರೋತ್ಸಾಹ ಧನ, ತಸ್ತೀಕ್ ಹಣ ಹೆಚ್ಚಳಕ್ಕೂ ಸರಕಾರಕ್ಕೆ ಪ್ರಸ್ತಾವನೆ

- Advertisement -

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಯ ಕನಸನ್ನು ರಾಜ್ಯದಲ್ಲೂ ನನಸು ಮಾಡುವ ನಿಟ್ಟಿನಲ್ಲಿ ನೂತನ ಯೋಜನೆ “ದೈವ ಸಂಕಲ್ಪ” ವನ್ನು ಮುಜರಾಯಿ ಇಲಾಖೆಯ ವತಿಯಿಂದ ಪ್ರಾರಂಭಿಸಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಪ್ರಕಟಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕಾಶಿಯನ್ನು ಅಭಿವೃದ್ಧಿಗೊಳಿಸಿದಂತೆ ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ 25 ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ರೂಪಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ 25 ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದ ಮೂಲಭೂತ ಸೌಕರ್ಯ, ಒಣ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೊಳಿಸುವ ಯೋಜನೆ ಇದಾಗಲಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಯಾವುದೇ ತೊಂದರೆ ಅಗದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕು. ದೇವಸ್ಥಾನಕ್ಕೆ ಅವರು ನೀಡುವ ಕಾಣಿಕೆಗಳು ಪಾರದರ್ಶಕತೆಯಿಂದ ಸದುಪಯೋಗ ಆಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ಅಭಿವೃದ್ದಿಗೊಳಿಸುವುದು ನನ್ನ ಮಹತ್ವದ ಕನಸಾಗಿದ್ದು, ಈ ಯೋಜನೆಯ ಮೊದಲ ಹಂತದ ಅಂದಾಜು ವೆಚ್ಚ 1140 ಕೋಟಿ ರೂಪಾಯಿಗಳಾಗಿವೆ ಎಂದು ಹೇಳಿದರು.

- Advertisement -

ಪ್ರತಿವರ್ಷ 1000 ಸಿ ದರ್ಜೆಯ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ:

ಕಡಿಮೆ ಆದಾಯವಿರುವ ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ಧಿ ಸರಿಯಾಗಿ ಅಗುತ್ತಿಲ್ಲ ಎನ್ನುವ ಹಲವಾರು ದೂರುಗಳು ಬಂದಿವೆ. ರಾಜ್ಯದಲ್ಲಿ 34,217 ಸಿ ದರ್ಜೆಯ ದೇವಸ್ಥಾನಗಳು ಇವೆ. ಪ್ರತಿವರ್ಷ ಇವುಗಳ ಅಭಿವೃದ್ಧಿಗೆ ಸರಕಾರದ ವತಿಯಿಂದ ಅನುದಾನ ನೀಡಲಾಗುತ್ತಿದೆ. ಆದರೂ, ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಪ್ರತಿವರ್ಷ 1000 ಸಿ ದರ್ಜೆಯ ದೇವಸ್ಥಾನಗಳನ್ನು ಸಮಗ್ರ ಅಭಿವೃದ್ದಿಗೊಳಿಸಲು ಕ್ರಮಕೈಗೊಳ್ಳಲಿದ್ದೇವೆ. ಸರಕಾರದ ವತಿಯಿಂದ ಅನುದಾನ ಹಾಗೆಯೇ ದಾನಿಗಳ ಸಹಯೋಗದೊಂದಿಗೆ ಸಮಗ್ರ ಅಭಿವೃದ್ಧಿಗೊಳಿಸಲಾಗುವುದು. ಪ್ರತಿವರ್ಷ ಜಿಲ್ಲೆಯಲ್ಲಿ ಬೇರೆ – ಬೇರೇ ದೇವಸ್ಥಾನಗಳನ್ನು ಅಭಿವೃದ್ದಿಗೆ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲಾ ಸಿ ದರ್ಜೆಯ ದೇವಸ್ಥಾನಗಳನ್ನು ಹಂತ ಹಂತವಾಗಿ ಅಭಿವೃದ್ದಿಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ರಾಜ್ಯದ ದೇವಾಲಯಗಳ ಅಭಿವೃದ್ದಿಗೆ 168 ಕೋಟಿ ವಿಶೇಷ ಅನುದಾನ:

ದೇವಾಲಯಗಳು ನಮ್ಮೊಂದಿಗೆ ಭಾವನಾತ್ಮಕವಾದ ಸಂಬಂಧ ಹೊಂದಿವೆ. ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ ವಿಶೇಷ ಕಾಳಜಿಯನ್ನು ನಮ್ಮ ಬಿಜೆಪಿ ಸರಕಾರ ವಹಿಸುತ್ತಿದೆ. ಈ ಬಾರಿಯ ಆಯವ್ಯಯದಲ್ಲಿ 119 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ದೇವಾಲಯಗಳ ಅಭಿವೃದ್ಧಿಗೆ 168 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನೀಡಿದ್ದು, ಒಟ್ಟಾರೆಯಾಗಿ ಪ್ರಸಕ್ತ ವರ್ಷ ಇದುವರೆಗೂ 287 ಕೋಟಿ ಅನುದಾನ ನೀಡಲಾಗಿದೆ. ಪ್ರತಿವರ್ಷ ಬಜೆಟ್ನಲ್ಲಿ 60 ರಿಂದ 70 ಕೋಟಿ ರೂಪಾಯಿಗಳಷ್ಟು ಅನುದಾನ ನೀಡಲಾಗುತ್ತಿತ್ತು, ಬಿಜೆಪಿ ಸರಕಾರ ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಿರುವ ಹಿನ್ನಲೆಯಲ್ಲಿ ಮುಜರಾಯಿ ಖಾತೆ ಸಚಿವೆಯಾಗಿ ನಾನು ಮುಖ್ಯಮಂತ್ರಿಗಳಿಗೆ ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಶ್ರೀಶೈಲದಲ್ಲಿ ಕರ್ನಾಟಕ ಛತ್ರ ನಿರ್ಮಾಣ:

ಕರ್ನಾಟಕ ರಾಜ್ಯದಿಂದ ಬಹುಸಂಖ್ಯೆಯಲ್ಲಿ ಭಕ್ತರು ತೆರಳುವ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮುಜರಾಯಿ ಇಲಾಖೆ ಒಡೆತನದಲ್ಲಿರುವ ಭೂಮಿಯಲ್ಲಿ ಕರ್ನಾಟಕ ಛತ್ರ ನಿರ್ಮಿಸಲು 85 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಈ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ. 45 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

12 ಜ್ಯೋತಿರ್ಲಿಂಗ ಹಾಗೂ ಅಷ್ಟವಿನಾಯಕ ಮತ್ತು ಕಾಶೀ ಯಾತ್ರೆಗೆ ಪ್ರೋತ್ಸಾಹ ಧನ:

ದೇಶದ ವಿವಿಧ ಭಾಗಗಳಲ್ಲಿರುವ 12 ಜ್ಯೋತಿರ್ಲಿಂಗ ಹಾಗೂ ಅಷ್ಟವಿನಾಯಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದು ಬಹಳ ಪುಣ್ಯವಾದ ಕೆಲಸ ಎನ್ನುವುದ ಹಿಂದುಗಳ ನಂಬಿಕೆ. ಈ ನಿಟ್ಟಿನಲ್ಲಿ ಕೈಲಾಸ ಮಾನಸ ಸರೋವರ ಮತ್ತು ಚಾರ್ಧಾಮ್ ಯಾತ್ರೆಗೆ ನೀಡುವ ಪ್ರೋತ್ಸಾಹ ಧನ ನೀಡುವ ಯೋಜನೆಯಂತೆ ಇವುಗಳಿಗೂ ಪ್ರೋತ್ಸಾಹ/ಸಹಾಯ ಧನ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗುವುದು. 12 ಜ್ಯೋತಿರ್ಲಿಂಗ ಯಾತ್ರೆ ಮತ್ತು ಅಷ್ಟವಿನಾಯಕ ಪ್ರೋತ್ಸಾಹ ಧನ ನೀಡುವ ಪ್ರಸ್ತಾವನೆ ಸಿದ್ದವಾಗಿದೆ. ಇನ್ನು ಕಾಶೀ ಯಾತ್ರೆಗೂ ಪ್ರತ್ಯೇಕವಾಗಿ ವಾರ್ಷಿಕವಾಗಿ ಎರಡು ಬಾರಿ ರೈಲಿನಲ್ಲಿ ಪ್ರವಾಸ ಏರ್ಪಡಿಸುವ ಅಥವಾ ಪ್ರೋತ್ಸಾಹ ಧನ ನೀಡುವ ಪ್ರಸ್ತಾವನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ತಸ್ತಿಕ್ ಹಣ ಹೆಚ್ಚಳಕ್ಕೆ ಸರಕಾರಕ್ಕೆ ಪ್ರಸ್ತಾವನೆ:

ರಾಜ್ಯ ಸರಕಾರದ ವತಿಯಿಂದ ರಾಜ್ಯದಲ್ಲಿರುವ ಸಿ ದರ್ಜೆಯ ದೇವಸ್ಥಾನಗಳಿಗೆ ವಾರ್ಷಿಕವಾಗಿ 48 ಸಾವಿರ ರೂಪಾಯಿಗಳ ತಸ್ತಿಕ್ ಹಣವನ್ನು ನೀಡಲಾಗುತ್ತಿದೆ. ಹೆಚ್ಚಿನ ಆದಾಯವಿಲ್ಲದ ದೇವಸ್ಥಾನಗಳ ಅರ್ಚಕರು ಹಾಗೂ ಮೋಕ್ತೇಸರರು ಹಲವಾರು ಬಾರಿ ಈ ಹಣವನ್ನು ಹೆಚ್ಚು ಮಾಡುವಂತೆ ಮನವಿ ಮಾಡಿದ್ದಾರೆ. ಇಂದಿನ ದಿನಮಾನದಲ್ಲಿ ಈ ಹಣ ಸಾಕಾಗುವುದಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿದ್ದು, ತಸ್ತಿಕ್ ಹಣವನ್ನು ಹೆಚ್ಚಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಅನುಮೋದನೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ರಾಜ್ಯದ ದೇವಸ್ಥಾನಗಳ ಜಮೀನು ಸರ್ವೆ:

ರಾಜ್ಯದ ದೇವಸ್ಥಾನಗಳ ವ್ಯಾಪ್ತಿಯಲ್ಲಿರುವ ಜಮೀನುಗಳ ಸರ್ವೇ ಕಾರ್ಯಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕಂದಾಯ ಸಚಿವರಾದ ಅಶೋಕ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಡ್ರೋನ್ ಸರ್ವೇ ಕಾರ್ಯದಲ್ಲಿ ದೇವಾಲಯಗಳ ಹಾಗೂ ವಕ್ಫ್ ಜಮೀನಿನ ಸಮೀಕ್ಷೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಕರ್ನಾಟಕದ ಛತ್ರ:

ಅಯೋಧ್ಯೆಯಲ್ಲಿ ಕರ್ನಾಟಕ ರಾಜ್ಯದ ಛತ್ರವನ್ನು ನಿರ್ಮಿಸಬೇಕು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಪತ್ರವ್ಯವಹಾರ ನಡೆಸಲಾಗಿದೆ. ಅಧಿವೇಶನ ಮುಗಿದ ನಂತರ ಆಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ಪ್ರಮುಖ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp