ನವದೆಹಲಿ : ಬೇರೊಂದು ಧರ್ಮದವನಿಗೆ ತನ್ನ ಆಸ್ತಿ ಮಾರಾಟ ಮಾಡುವಾಗ, ತನ್ನ ಧರ್ಮವನ್ನು ಮುಚ್ಚಿಟ್ಡಿದ್ದಕ್ಕಾಗಿ ಗುಜರಾತ್ ನ ವಡೋದರಾದ ನಿವಾಸಿಯೊಬ್ಬರ ವಿರುದ್ಧ ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಗುಜರಾತ್ ನ ಸ್ಥಿರಾಸ್ಥಿ ಹಸ್ತಾಂತರ ತಡೆ ಕಾಯ್ದೆಯನ್ನು ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆ ಎಂದು ಹೇಳಲಾಗುತ್ತದೆ. ಈ ಕಾಯ್ದೆಯ ಪ್ರಕಾರ, ಗುರುತಿಸಲಾದ ಪ್ರದೇಶಗಳಲ್ಲಿ, ಭಿನ್ನ ಧರ್ಮೀಯ ವ್ಯಕ್ತಿಗಳು ತಮ್ಮ ಆಸ್ತಿ ಮಾರಾಟದ ವೇಳೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು.
ಈ ಪ್ರಕರಣಕ್ಕೆ ಸಂಬಂಧಿಸಿದ ಎಫ್ ಐಆರ್ ಪ್ರಕಾರ, ಪಾರ್ಸಿ ವ್ಯಕ್ತಿ ಫಿರೋಜ್ ಕಾಂಟ್ರಾಕ್ಟರ್ ಎಂಬಾತ ತನ್ನ ಧರ್ಮವನ್ನು ಮುಚ್ಚಿಟ್ಟು, ವಡೋದರಾದ ವಾಸ್ನಾ ರಸ್ತೆಯ ಸಮರ್ಪಣ್ ಸೊಸೈಟಿಯ ಜಾಗವೊಂದನ್ನು ಮಾರಾಟ ಮಾಡಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ಆಸ್ತಿಯನ್ನು ಫಿರೋಜ್ ಪಟೇಲ್, ಆತನ ತಾಯಿ ಹನೀಫಾ ಮತ್ತು ಸಹೋದರ ಸಬೀರ್ ಪಟೇಲ್ ಎಂಬಾತನಿಗೆ ಮಾರಾಟ ಮಾಡಲು ಫಿರೋಜ್ ಕಾಂಟ್ರಾಕ್ಟರ್ ಉದ್ದೇಶಿಸಿದ್ದ.
ಆಶ್ಚರ್ಯವೇನೆಂದರೆ, ಈ ಪ್ರದೇಶದಲ್ಲಿ ಮುಸ್ಲಿಂ ಕುಟುಂಬಕ್ಕೆ ಆಸ್ತಿ ಮಾರಾಟವನ್ನು ಆಕ್ಷೇಪಿಸಿ ಸೊಸೈಟಿಯ ಅಧ್ಯಕ್ಷ ಮನೀಶ್ ಮಲ್ಹೋತ್ರಾ ಎಂಬವರು ದೂರು ದಾಖಲಿಸಿದ್ದಾರೆ. ಫಿರೋಜ್ ಕಾಂಟ್ರಾಕ್ಟರ್ ಪಾರ್ಸಿ ವ್ಯಕ್ತಿಯಾಗಿದ್ದು, ಆಸ್ತಿ ಮಾರಾಟದ ವೇಳೆ ಅನುಮತಿ ಪಡೆಯಲು ತನ್ನ ಧರ್ಮವನ್ನು ಬಹಿರಂಗ ಪಡಿಸಿಲ್ಲ ಎಂದು ಮಲ್ಹೋತ್ರಾ ದೂರಿದ್ದಾರೆ. ಕಾಂಟ್ರಾಕ್ಟರ್ ಮತ್ತು ಪಟೇಲ್ ಒಂದೇ ಸಮುದಾಯದವರು ಎಂಬಂತೆ ಆತ ಬಿಂಬಿಸಿದ್ದ ಎಂದು ಮಲ್ಹೋತ್ರಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.