ಮಂಗಳೂರು: ದೇಶದಲ್ಲಿ ಚೆಸ್ ಕ್ರೀಡೆಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಇದೇ ಜುಲೈ 19 ರಿಂದ ನವದೆಹಲಿಯಲ್ಲಿ ಪ್ರಾರಂಭವಾಗುತ್ತಿರುವ 44ನೇ ಚೆಸ್ ಒಲಂಪಿಯಾಡ್ ಕ್ರೀಡಾಕೂಟದ ಹಿನ್ನಲೆಯಲ್ಲಿ ಅಂದೇ ಮಂಗಳೂರಿನಲ್ಲಿ ಸಂಘಟಿಸಲಾಗುತ್ತಿರುವ ಜಿಲ್ಲಾ ಮಟ್ಟದ ಟಾರ್ಚ್ ರಿಲೇ ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೆ.ಎಚ್. ಕೃಷ್ಣಮೂತಿ ಅವರು ತಿಳಿಸಿದರು.
ಅವರು ಜು.8ರ ಶುಕ್ರವಾರ ನಗರದ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿ ಈ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
44ನೇ ಚೆಸ್ ಒಲಂಪಿಯಾಡ್ ಕ್ರೀಡಾಕೂಟದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ದೇಶದ 35 ರಾಜ್ಯಗಳು ಹಾಗೂ 40 ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯಮಟ್ಟದ ಟ್ವಾರ್ಚ್ ರಿಲೇ ಕಾರ್ಯಕ್ರಮಗಳು ನಡೆಯಲಿವೆ. ಉದ್ಘಾಟನಾ ಸಮಾರಂಭವು ನವದೆಹಲಿಯಲ್ಲಿ ನಡೆಯಲಿದ್ದು, ಬೆಂಗಳೂರಿನಲ್ಲಿ ಜು.18ರಂದು ರಾಜ್ಯ ಮಟ್ಟದ ಟಾರ್ಚ್ ರಿಲೇ ಹಾಗೂ ಜು.19ರಂದು ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಟ್ವಾರ್ಚ್ ರಿಲೇ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ, ಇದರ ಉಸ್ತುವಾರಿಯನ್ನು ನೆಹರು ಯುವ ಕೇಂದ್ರ ಸಂಘಟನೆಯು ವಹಿಸಲಿದೆ, ಸಂಬಂಧಿಸಿದ ಇಲಾಖೆಗಳು ಅಗತ್ಯ ಅಗತ್ಯ ನೆರವು ಹಾಗೂ ಸಹಕಾರ ನೀಡುವ ಮೂಲಕ ಈ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸುವಂತೆ ಅವರು ತಿಳಿಸಿದರು.
ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸುಮಾರು 2000 ಕ್ರೀಡಾಪಟುಗಳು ಹಾಗೂ ಜಿಲ್ಲಾ ಮಟ್ಟದಲ್ಲಿ 500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ, ಚೆಸ್ ಕ್ರೀಡೆಗೆ ಸಂಬಂಧಿಸಿದಂತೆ ಹಾಗೂ ಜಿಲ್ಲೆಯ ಸಾಂಸ್ಕøತಿಕ ಇತಿಹಾಸವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಹೇಳಿದರು.
ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ರಘುವೀರ್ ಸೂಟರ್ ಪೇಟೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.