ಮಂಗಳೂರು: ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ 25-30ವರ್ಷಗಳ ನಂತರ ಭಾರಿ ಪ್ರಮಾಣದ ಮಳೆಯಾದ ಕಾರಣ ವಿವಿಧೆಡೆ ಹಾನಿಗಳು ಸಂಭವಿಸಿವೆ. ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಸಂಕಷ್ಟಕ್ಕೀಡಾದ ಜನರ ಬಳಿಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿ, ಅವರ ಕಷ್ಟಗಳನ್ನು ಪರಿಹರಿಸುವ ಕೆಲಸ ಮಾಡುವಂತೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಬುಧವಾರ ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಗೀಡಾದ ವಿವಿಧ ಸ್ಥಳಗಳನ್ನು ಪರಿಶಿಲಿಸಿದ ನಂತರ ಸುಳ್ಯದ ತಾಲೂಕು ಪಂಚಾಯತ್ ನಲ್ಲಿ ಹಮ್ಮಿಕೊಂಡಿದ್ದ ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆಯಿಂದ ವಿವಿಧ ರೀತಿಯ ಹಾನಿಗೀಡಾದವರ ಬಳಿಗೆ ಕಂದಾಯ, ಕೃಷಿ, ತೋಟಗಾರಿಕೆ, ಅರಣ್ಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೇ ಧಾವಿಸಿ, ನೊಂದವರಿಗೆ ಸರ್ಕಾರ ಹಾಗೂ ಮಾನವೀಯತೆಯ ದೃಷ್ಟಿಯಿಂದ ಅಗತ್ಯವಿರುವ ನೆರವು ನೀಡಬೇಕು. ಮುಖ್ಯವಾಗಿ ಇಲ್ಲಿ ಅರಣ್ಯ ಇಲಾಖೆಯ ಪಾತ್ರ ಬಹಳ ದೊಡ್ಡದಿದೆ, ನದಿ ಪಾತ್ರದ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ಮರಗಳಿವೆ, ಸೇತುವೆಗಳು ಹಾಗೂ ವೆಂಟೆಡ್ ಡ್ಯಾಂಗಳಿಂದ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಲಾಗಿರುವ ಮರದ ದಿಮ್ಮಿಗಳನ್ನು ತೆರವುಗೊಳಿಸಬೇಕು, ಅದಕ್ಕಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ವಿವಿಧ ಪಾಳಿಗಳಲ್ಲಿ ನಿಯೋಜಿಸುವಂತೆ ಅವರು ನಿರ್ದೇಶನ ನೀಡಿದರು.
ಇಂತಹ ಸಂದರ್ಭಗಳಲ್ಲಿ ಇದೂವರೆಗೆ ಯಾರನ್ನು ಸಂಪರ್ಕಿಸಲು ಸಾಧ್ಯವಾಗಿರುವುದಿಲ್ಲವೂ ಅಂತಹವರನ್ನು ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು ಮುತುವರ್ಜಿ ವಹಿಸಿ ಪತ್ತೆ ಮಾಡಬೇಕು ಹಾಗೂ ಅವರಿಗೆ ಪಡಿತರ ವಿತರಿಸಬೇಕು, ಅವರ ಸ್ಥಿತಿಗಳನ್ನು ಅಧಿಕಾರಿಗಳು ಖುದ್ದಾಗಿ ನೋಡಿಕೊಂಡು ಬರಬೇಕು, ಮತ್ತೆ ಇದೇ ರೀತಿಯ ಮಳೆಯಾದರೆ, ಯಾವುದೇ ರೀತಿಯ ಅಪಾಯಗಳಾಗದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕು,
ಜಿಲ್ಲೆಯ ಜನರ ಹಿತ ಕಾಪಾಡಲು ಏನೇನು ಮಾಡಬೇಕು ಅವುಗಳನ್ನೆಲ್ಲಾ ಮಾಡಲೇಬೇಕು. ಪ್ರಾಣ ಹಾನಿ ಹಾಗೂ ಹೆಚ್ಚು ಹಾನಿಗಳಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ತುಂಡಾಗಿರುವ ರಸ್ತೆ ಸಂಪರ್ಕವನ್ನು ಪುನಃ ಸ್ಥಾಪಿಸಬೇಕು, ಸುಬ್ರಹ್ಮಣ್ಯ ಸೇರಿದಂತೆ ಆ ವ್ಯಾಪ್ತಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಬೇಕು,
ಆ ಮೂಲಕ ಜಿಲ್ಲೆಯ ಜನರ ಹಿತ ಕಾಪಾಡಲು ಎಚ್ಚರಿಕೆ ವಹಿಸಬೇಕು, ಮಳೆಯಿಂದ ಹಾನಿಯಾದ ಬಗ್ಗೆ ವರದಿಯಾದ ಕೂಡಲೇ ಅಧಿಕಾರಿಗಳು ಪರಿಶೀಲಿಸಿ ಪರಿಹಾರ ಕಲ್ಪಿಸಬೇಕು, ಶನಿವಾರ ಹಾಗೂ ಭಾನುವಾರ ಅಧಿಕಾರಿಗಳು ರಜೆ ಪಡೆಯದೇ ವಿಕೋಪಕ್ಕೀಡಾದ ಸ್ಥಳಗಳಿಗೆ ಭೇಟಿ ನೀಡಬೇಕು, ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು ಎಂಬ ಸೂಚನೆಗಳನ್ನು ನೀಡಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ ಕುಮಾರ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ,ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಆಶಿಶ್ ರೆಡ್ಡಿ, ಕೃಷಿ, ತೋಟಗಾರಿಕೆ ಸೇರಿದಂತೆ ಸಂಬಂಧಪಟ್ಟ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.