ರಾಜ್ಯಮಟ್ಟದ ‘ಅತ್ಯುತ್ತಮ ಜಿಲ್ಲಾ ಚುನಾವಣಾಧಿಕಾರಿ’ ಪ್ರಶಸ್ತಿ ಪಡೆದ ಬೆಳಗಾವಿ ಜಿಲ್ಲಾಧಿಕಾರಿ

Prasthutha|

ಬೆಳಗಾವಿ: ಭಾರತ ಚುನಾವಣಾ ಆಯೋಗದ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ನೀಡಲಾಗುವ ಅತ್ಯುತ್ತಮ “ಜಿಲ್ಲಾ ಚುನಾವಣಾಧಿಕಾರಿ” ಪ್ರಶಸ್ತಿಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಭಾಜನರಾಗಿದ್ದಾರೆ.

- Advertisement -

ಚುನಾವಣಾ ಆಯೋಗದ ವತಿಯಿಂದ ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್​ನಲ್ಲಿ ಏರ್ಪಡಿಸಲಾಗಿದ್ದ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಸ್ತಿಯನ್ನು ಪ್ರದಾನ‌ ಮಾಡಿದರು. ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜಕುಮಾರ್ ಮೀನಾ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಾಗವಾಡ ತಹಶೀಲ್ದಾರರಾಗಿರುವ ರಾಜೇಶ್ ಬುರ್ಲಿ ಅವರಿಗೆ ಸಹಾಯಕ ಮತದಾರರ ನೋಂದಣಾಧಿಕಾರಿ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮತದಾರರ ನೋಂದಣಿ, ಪರಿಷ್ಕರಣೆ ಸೇರಿದಂತೆ ಒಟ್ಟಾರೆ ಚುನಾವಣಾ ಕಾರ್ಯವನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿರುತ್ತದೆ.

- Advertisement -

ಇದೇ ರೀತಿ ತುಮಕೂರು, ಯಾದಗಿರಿ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಪ್ರಶಸ್ತಿ ನೀಡಲಾಯಿತು. ಇದಲ್ಲದೆ ವಿವಿಧ ಜಿಲ್ಲೆಗಳ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ನೋಂದಣಾಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಚುನಾವಣಾ ಶಾಖೆಯ ತಾಂತ್ರಿಕ ಸಿಬ್ಬಂದಿಗೂ ಪ್ರತ್ಯೇಕ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು.



Join Whatsapp