ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧದ ರೈತರ ಹೋರಾಟ ಸಂಬಂಧಿತ ‘ಟೂಲ್ ಕಿಟ್’ ಪ್ರಕರಣದಲ್ಲಿ ಬೆಂಗಳೂರಿನಿಂದ ಬಂಧಿಸಲ್ಪಟ್ಟ 22 ವರ್ಷದ ಹೋರಾಟಗಾರ್ತಿ ದಿಶಾ ರವಿಗೆ ನಿನ್ನೆ ದೆಹಲಿ ಕೋರ್ಟ್ ಜಾಮೀನು ನೀಡಿದೆ. ದಿಶಾ ರವಿಗೆ ಜಾಮೀನು ಮಂಜೂರು ಮಾಡುವಾಗ ದೆಹಲಿ ನ್ಯಾಯಾಲಯವು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದೇಶದಲ್ಲಿ ಭಿನ್ನಾಭಿಪ್ರಾಯದ ಹಕ್ಕಿನ ಪರವಾಗಿ ಬಲವಾದ ಹೇಳಿಕೆಗಳನ್ನು ನೀಡಿದೆ.
ಪ್ರಕರಣದಲ್ಲಿ ನ್ಯಾಯಾಧೀಶರ ಪ್ರಮುಖ ಉಲ್ಲೇಖಗಳು ಇಲ್ಲಿವೆ :
- ಜಾಮೀನು ಮನವಿಗೆ ದೆಹಲಿ ಪೊಲೀಸರ ವಿರೋಧವು ಕೇವಲ ಅಲಂಕಾರಿಕವಾಗಿದೆ ಎಂದು ತೋರುತ್ತದೆ. ದಾಖಲೆಯಲ್ಲಿ ಲಭ್ಯವಿರುವ ಅಲ್ಪ ಮತ್ತು ಹುರುಳೇ ಇಲ್ಲದ ಸೂಕ್ಷ್ಮ ಪುರಾವೆಗಳನ್ನು ಗಮನಿಸಿದರೆ, 22 ವರ್ಷದ ಯುವತಿಯ ವಿರುದ್ಧ ಜಾಮೀನು ಎಂಬ ಸಾಮಾನ್ಯ ನಿಯಮವನ್ನು ಉಲ್ಲಂಘಿಸಲು ಯಾವುದೇ ಸ್ಪಷ್ಟವಾದ ಕಾರಣಗಳು ಕಂಡುಬಂದಿಲ್ಲ.
- ಸಂಪೂರ್ಣವಾಗಿ ಯಾವುದೇ ಕ್ರಿಮಿನಲ್ ಕಳಂಕವಿಲ್ಲದ, ಸಮಾಜದಲ್ಲಿ ಸುಭದ್ರ ಸ್ಥಾನಮಾನವನ್ನು ಹೊಂದಿರುವ ಯುವತಿಯನ್ನು ಮತ್ತೆ ಜೈಲಿಗೆ ಕಳುಹಿಸಲು ಯಾವುದೇ ಕಾರಣಗಳು ಕಾಣುತ್ತಿಲ್ಲ.
- ಜ.26ರಂದು ಆರೋಪಿಗಳು ಪೋಯೆಟಿಕ್ ಜಸ್ಟೀಸ್ ಫೌಂಡೇಶನ್ ನ ಸಂಸ್ಥಾಪಕರೊಂದಿಗೆ ಸೇರಿ ಹಿಂಸಾಚಾರ ಹುಟ್ಟುಹಾಕಲು ಯತ್ನಿಸಿದ್ದಾರೆ ಅಥವಾ ಅದಕ್ಕಾಗಿ ಟೂಲ್ ಕಿಟ್ ಹಂಚಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದುದರಿಂದ, ಅವರು ಪ್ರತ್ಯೇಕತಾವಾದಿ ಪ್ರವೃತ್ತಿಯನ್ನು ಅಥವಾ ಗಣರಾಜ್ಯೋತ್ಸವದಂದು ಉಂಟಾದ ಹಿಂಸಾಚಾರವನ್ನು ಬೆಂಬಲಿಸಿದರು ಎಂಬುದನ್ನು ಒಪ್ಪಲಾಗದು.
- ಅವರು ಕಾನೂನುಗಳನ್ನು ವಿರೋಧಿಸಲು ಬೇಕಾಗಿ ಹಲವು ಜನರೊಂದಿಗೆ ಒಂದು ವೇದಿಕೆಯನ್ನು ಹಂಚಿಕೊಂಡಿದ್ದಾರೆ ಅಷ್ಟೇ.
- ಜ.26ರ ಹಿಂಸಾಚಾರದ ದುಷ್ಕರ್ಮಿಗಳು, ಪಿಜೆಎಫ್, ಆರೋಪಿಗಳ ನಡುವಿನ ಸಂಪರ್ಕವಿರುವ ಯಾವ ಸಾಕ್ಷ್ಯಾಧಾರಗಳೂ ಇಲ್ಲ. ಟೂಲ್ ಕಿಟ್ ನಲ್ಲಿ ಯಾವುದೇ ರೀತಿಯ ಹಿಂಸಾಚಾರಕ್ಕೆ ನೆರವಾಗುವ ಕರೆಯನ್ನು ನೀಡಿಲ್ಲ.
- ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ನಾಗರಿಕರು ಸರಕಾರದ ಆತ್ಮಸಾಕ್ಷಿಯ ಪಾಲಕರು, ಸರಕಾರದ ನೀತಿಗಳನ್ನು ಒಪ್ಪುವುದಿಲ್ಲ ಎಂದ ಮಾತ್ರಕ್ಕೆ ಅವರನ್ನು ಜೈಲಿನಲ್ಲಿ ಇಡಲಾಗುವುದಿಲ್ಲ.
- ನಮ್ಮ ಸಂವಿಧಾನ ನಿರ್ಮಾತೃಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕು ಎಂದು ಗುರುತಿಸುವ ಮೂಲಕ ಅಭಿಪ್ರಾಯದ ಭಿನ್ನತೆಗೆ ಸರಿಯಾದ ಗೌರವವನ್ನು ನೀಡಿದ್ದಾರೆ.
- ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಜಾಗತಿಕ ಬೆಂಬಲ ಪಡೆಯುವ ಹಕ್ಕನ್ನು ಒಳಗೊಂಡಿದೆ.
- ವಿಚಾರ ವಿನಿಮಯಕ್ಕೆ ಯಾವುದೇ ಭೌಗೋಳಿಕ ಅಡೆತಡೆಗಳಿಲ್ಲ. ಕಾನೂನು ಚೌಕಟ್ಟಿನೊಳಗಡೆ ವಿದೇಶದಲ್ಲಿರುವವರೊಂದಿಗೂ ವಿಚಾರ ವಿನಿಮಯ ಮಾಡುವುದು ನಾಗರಿಕರ ಮೂಲಭೂತ ಹಕ್ಕಾಗಿದೆ.