ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪನೆ ಬಗ್ಗೆ ಕೇಂದ್ರದೊಂದಿಗೆ ಚರ್ಚೆ: ಅರಗ ಜ್ಞಾನೇಂದ್ರ

Prasthutha|

ಮಂಗಳೂರು: ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪನೆ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -


ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಭಯೋತ್ಪಾದನಾ ಚಟುವಟಿಕೆ ಬಹಳ ವರ್ಷಗಳಿಂದ ನಡೆಯುತ್ತಿದೆ. ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ನಿಗಾ ಇಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ರಾಜ್ಯ ಸರ್ಕಾರ ವಿಶೇಷವಾಗಿ ನಿಗಾವಹಿಸಿದೆ. ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ, ಎನ್ಐಎ ಕಚೇರಿ ಸ್ಥಾಪನೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.


ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಗತ ಮಾಡಿದ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೊಡಗು, ಮಲೆನಾಡು ಸೇರಿದಂತೆ ಮುಂತಾದ ಕಡೆಗಳಲ್ಲಿ ಸಂತೋಷಕೂಟ ಹಾಗೂ ಯಾರಾದರೂ ಮೃತಪಟ್ಟರೆ ಗುಂಡು ಹಾರಿಸುವ ಪ್ರಕ್ರಿಯೆ ಇದೆ. ಅದು ಕಾನೂನು ಪ್ರಕಾರ ತಪ್ಪು. ಏನಾದರೂ ಹೆಚ್ಚು ಕಡಿಮೆಯಾದಲ್ಲಿ ಪ್ರಾಣ ಹೋಗುವ ಪರಿಸ್ಥಿತಿ ಇದೆ. ಈ ವಿಚಾರದಲ್ಲಿ ಈಗಾಗಲೇ ಎಫ್ಐಆರ್ ಆಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಅಫ್ಘಾನಿಸ್ತಾನದಲ್ಲಿ ಎಷ್ಟು ಜನ ಭಾರತೀಯರು ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಅವರನ್ನು ಯಾವುದೇ ತೊಂದರೆಯಾಗದಂತೆ ಕರೆದುಕೊಂಡು ಬರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ. ರಾಜ್ಯದಿಂದಲೂ ಸಿಐಡಿಯಲ್ಲಿ ಕರ್ತವ್ಯದಲ್ಲಿರುವ ಉಮೇಶ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದೇವೆ. ಸಂಕಷ್ಟದಲ್ಲಿರುವ ಕನ್ನಡಿಗರು ಅವರನ್ನು ಸಂಪರ್ಕ ಮಾಡಬಹುದು ಎಂದು ಹೇಳಿದರು.

Join Whatsapp