ಕಣ್ಮರೆಯಾಗುತ್ತಿರುವ ತನಿಖಾ ಪತ್ರಿಕೋದ್ಯಮ: ಮಾಧ್ಯಮಗಳ ಆತ್ಮಾವಲೋಕನಕ್ಕೆ ಕರೆ ನೀಡಿದ ಸಿಜೆಐ ಎನ್ ವಿ ರಮಣ

Prasthutha|

ನವದೆಹಲಿ: ದೇಶದಲ್ಲಿ ಪತ್ರಿಕೋದ್ಯಮದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ವಿಷಾದ ವ್ಯಕ್ತಪಡಿಸಿದ್ದು ತನಿಖಾ ಪತ್ರಿಕೋದ್ಯಮ ದೇಶದಿಂದ ಕಣ್ಮರೆಯಾಗಿದೆ ಎಂದಿದ್ದಾರೆ.

- Advertisement -

ಬುಧವಾರ ಏರ್ಪಡಿಸಲಾಗಿದ್ದ ಪತ್ರಕರ್ತ ಹಾಗೂ ವಕೀಲ ಸುಧಾಕರ ರೆಡ್ಡಿ ಉಡುಮುಲ ಅವರ ‘ಬ್ಲಡ್ ಸ್ಯಾಂಡರ್ಸ್: ದಿ ಗ್ರೇಟ್ ಫಾರೆಸ್ಟ್ ಹೈಸ್ಟ್ʼ ಕೃತಿ ಬಿಡುಗಡೆ ಸಮಾರಂಭದಲ್ಲಿ ಸಿಜೆಐ ಮಾತನಾಡುತ್ತಿದ್ದರು.

ವೃತ್ತಿ ಜೀವನದ ಆರಂಭದಲ್ಲಿ ಖುದ್ದು ಪತ್ರಕರ್ತರಾಗಿದ್ದ ನ್ಯಾ. ರಮಣ “ಮಾಧ್ಯಮಗಳು ದೊಡ್ಡ ಸುದ್ದಿಗಳನ್ನು ಬಯಲಿಗೆಳೆಯುತ್ತಿಲ್ಲ ಅಥವಾ ಗಂಭೀರವಾದ ತನಿಖಾ ಸುದ್ದಿಗಳನ್ನು ಪ್ರಕಟಿಸುತ್ತಿಲ್ಲ. ತನಿಖಾ ಪತ್ರಿಕೋದ್ಯಮದ ಪರಿಕಲ್ಪನೆ ದುರದೃಷ್ಟವಶಾತ್ ಮಾಧ್ಯಮದ ಭಿತ್ತಿಯಿಂದ ಕಣ್ಮರೆಯಾಗುತ್ತಿದೆ. ಇದು ಭಾರತೀಯ ಸಂದರ್ಭದಲ್ಲಂತೂ ನಿಜವಾಗಿದೆ” ಎಂದರು.

- Advertisement -

ಹಿಂದೆ ದೊಡ್ಡ ಹಗರಣಗಳು ಮತ್ತು ಅವ್ಯವಹಾರಗಳನ್ನು ಬಯಲಿಗೆಳೆಯುವಲ್ಲಿ ಪತ್ರಿಕೆಗಳು ಹೇಗೆ ಸಹಕಾರಿಯಾಗಿದ್ದವು ಎಂಬುದನ್ನು ಅವರು ಸ್ಮರಿಸಿದರು. ಅಲ್ಲದೆ “ಪತ್ರಿಕೆಗಳ ಬಗ್ಗೆ ಗಾಂಧೀಜಿ ಹೇಳಿದ್ದನ್ನು ನಾನು ನೆನಪಿಸಿಕೊಳ್ಳ ಬಯಸುತ್ತೇನೆ: ಪತ್ರಿಕೆಗಳನ್ನು ಸತ್ಯದ ಅಧ್ಯಯನಕ್ಕಾಗಿ ಓದಬೇಕು. ಸ್ವತಂತ್ರ ಚಿಂತನೆಯ ರೂಢಿಯನ್ನು ಅವು ಕೊಲ್ಲಲು ಬಿಡಬಾರದುʼ ಎಂದಿದ್ದರು. ಮಹಾತ್ಮರ ಈ ಮಾತುಗಳ ಬಗ್ಗೆ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುತ್ತವೆ ಮತ್ತು ಪರೀಕ್ಷಿಸಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ ”ಎಂದು ಸಿಜೆಐ ಹೇಳಿದರು.

ಲೇಖಕ ಉಡುಮುಲ ಅವರು ಪುಸ್ತಕಕ್ಕಾಗಿ ಕೈಗೊಂಡ ವ್ಯಾಪಕ ಸಂಶೋಧನೆಗೆ ಮೆಚ್ಚುಗೆ ಸೂಚಿಸಿದ ನ್ಯಾಯಮೂರ್ತಿಗಳು “ಇದು ರಕ್ತ ಚಂದನ ಮರಗಳ ಕಳ್ಳಸಾಗಣೆ ಕುರಿತಾದ ಮೊದಲ ಸಮಗ್ರ ಗ್ರಂಥ” ಎಂದರು. ಆಂಧ್ರಪ್ರದೇಶದ ಶೇಷಾಚಲಂನಲ್ಲಿ ರಕ್ತ ಚಂದನ ಮರಗಳ ಕಳ್ಳಸಾಗಣೆ ಭೀತಿ ತಡೆಯಲು ಬುಡಕಟ್ಟು ಜನರು ಮತ್ತಿತರ ಅರಣ್ಯವಾಸಿಗಳ ಸಹಾಯವನ್ನು ಅಧಿಕಾರಿಗಳು ಪಡೆಯಬೇಕು ಎಂದು ಕೂಡ ಸಿಜೆಐ ಈ ಸಂದರ್ಭದಲ್ಲಿ ಸಲಹೆ ನೀಡಿದರು.

(ಕೃಪೆ: ಬಾರ್ ಆ್ಯಂಡ್ ಬೆಂಚ್)



Join Whatsapp