ಬೆಂಗಳೂರು : ರಾಜ್ಯದಲ್ಲಿ ಭಾರಿ ಚರ್ಚೆಗೀಡಾಗಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆಗೂ ಕಾರಣವಾದ ಸಿಡಿ ಪ್ರಕರಣ ಭಾನುವಾರದಂದು ಮಹತ್ವದ ತಿರುವು ಪಡೆದುಕೊಂಡಿದೆ. ದೂರುದಾರ, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಮ್ಮ ದೂರು ವಾಪಸ್ ಪಡೆದಿದ್ದ ಬಗ್ಗೆ ಸ್ಪಷ್ಟನೆ ಇರುವ ಸುದೀರ್ಘ ಪತ್ರವನ್ನು ಮಾಧ್ಯಮಗಳ ಮುಂದಿಟ್ಟಿದ್ದರು. ದಿನೇಶ್ ಅಂದು ದೂರು ನೀಡಿದ್ದೇಕೆ? ನಂತರ ಹಿಂಪಡೆಯಲು ಮುಂದಾಗಿದ್ದೇಕೆ? ಎಂಬುದರ ಬಗ್ಗೆ ದಿನೇಶ್ ಪರ ವಕೀಲ ಕುಮಾರ್ ಪಾಟೀಲ್ ವಿವರಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ನೀಡಿದ್ದ ದೂರನ್ನು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದಿರುವುದು ನಿಜ. ದೂರು ಹಿಂಪಡೆಯುವ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಲಿದ್ದೇವೆ ಎಂದು ವಕೀಲ ಕುಮಾರ್ ಪಾಟೀಲ್ ಹೇಳಿದ್ದಾರೆ.
”ದಿನೇಶ್ ಅಂದು ದೂರು ನೀಡಿದ್ದು ನಿಜ. ಆದರೆ ಪೊಲೀಸರು ಇಲ್ಲಿ ತನಕ ಪ್ರಕರಣ ದಾಖಲಿಸಿರಲಿಲ್ಲ. ಕಾನೂನಿನಲ್ಲಿ ದೂರು ಹಿಂಪಡೆಯಲು ಅವಕಾಶ ಇದೆ, ನನ್ನ ಕಕ್ಷೀದಾರ ದಿನೇಶ್ ಅವರ ಮೇಲೆ ಯಾವುದೇ ಒತ್ತಡ ಇಲ್ಲ. ಅವರು ಭಯಪಟ್ಟಿದ್ದಾರೆ ಎಂಬುದು ಸುಳ್ಳು” ಎಂದು ಪಾಟೀಲ್ ಹೇಳಿದ್ದಾರೆ.
ಸಂತ್ರಸ್ತೆಗೆ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಿಂದ ಅನ್ಯಾಯ ಆಗಿದೆ. ಅಂಗಿ ಮುಳ್ಳಿಗೆ ಬಿದ್ದರೂ ಮುಳ್ಳು ಅಂಗಿಯ ಮೇಲೆ ಬಿದ್ದರೂ ಹರಿಯುವುದು ಅಂಗಿಯೇ. ಹೀಗಾಗಿ ದಿನೇಶ್ ಅವರ ಸೂಚನೆಯಂತೆ ದೂರು ಹಿಂಪಡೆಯಲಾಗುತ್ತಿದೆ. ದಿನೇಶ್ ಅವರ ಉದ್ದೇಶವನ್ನೇ ಹಾಳುಗೆಡವಂಥ ಪರಿಸ್ಥಿತಿ ಎದುರಾಯಿತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.