‘ಬಿಜೆಪಿ ಜನರ ಚಿತೆಯಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಿದೆ’ : ದಿನೇಶ್​ ಗುಂಡೂರಾವ್​ ಆಕ್ರೋಶ

Prasthutha|

ಕೋವಿಡ್ ಮಹಾಮಾರಿಯಿಂದ ಇಡೀ ರಾಜ್ಯವೇ ತತ್ತರಿಸಿ ಹೋಗಿದ್ದು, ಹಲವು ಸಾವು ನೋವುಗಳಿಂದ ಜನತೆ ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ಗಿಡ್ಡೇನಹಳ್ಳಿಯಲ್ಲಿ ರಾಜ್ಯ ಸರ್ಕಾರ ಕೋವಿಡ್​ನಿಂದ ಮೃತರಾದವರ ಸಾಮೂಹಿಕ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿತ್ತು. ಆದರೆ ಇದರಲ್ಲಿಯೂ ಪ್ರಚಾರವನ್ನು ಪಡೆಯಲು ಹೊರಟ ಬಿಜೆಪಿ ನಾಯಕರು ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಬಂದವರಿಗೆ ಉಚಿತ ಉಪಹಾರದ ವ್ಯವಸ್ಥೆ ಇದೆ ಎಂಬ ಫ್ಲೆಕ್ಸ್ ಹಾಕಲು ಹೋಗಿ ಭಾರೀ ಮುಖಭಂಗಕ್ಕೆ ಈಡಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಫ್ಲೆಕ್ಸ್ ಬಗ್ಗೆ ಭಾರೀ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕಟೌಟನ್ನು ತೆರವುಗೊಳಿಸಲಾಗಿದ್ದು, ಈ ಸಂಬಂಧ ಇಂದು ಟ್ವೀಟ್​ ಮಾಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​, ಬಿಜೆಪಿಯು ಚಿತೆಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಹೀನ ಬುದ್ದಿಯನ್ನು ತೋರಿಸುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇದು ನಾಯಕರ ಪರಮ ಅಸಹ್ಯತನದ ಪರಮಾವಧಿಯಾಗಿದೆ. ಚಿತೆಯಲ್ಲಿ ಬೆಂಕಿ ಕಾಯಿಸಿಕೊಳ್ಳುವ ಹೀನ ಬುದ್ಧಿಯನ್ನ ತೋರಿಸುವ ಮೂಲಕ ಬಿಜೆಪಿ ಸರ್ಕಾರದ ಬಂಡವಾಳ ಬಯಲಾಗಿದೆ. ಜನರ ಸಾವನ್ನೂ ಪ್ರಚಾರಕ್ಕೆ ಬಳಸಿಕೊಳ್ಳುವ ಬಿಜೆಪಿ ನಾಯಕರಲ್ಲಿ ಮನುಷ್ಯತ್ವ ಸತ್ತು ಹೋಗಿದೆಯೇ..? ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗಿಡ್ಡೇನಹಳ್ಳಿಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್​ನಲ್ಲಿ ಕೋವಿಡ್​ ಶವಗಳಿಗೆ ಸಕಲ ಸರ್ಕಾರಿ ಮರ್ಯಾದೆಯಿಂದ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಈ ಕಾರ್ಯಕ್ಕೆ ಬಂದವರಿಗೆ ಉಚಿತ ನೀರು, ಕಾಫಿ, ಟೀ ಹಾಗೂ ತಿಂಡಿ ವ್ಯವಸ್ಥೆ ಇದೆ ಎಂದು ಬರೆಯಲಾಗಿತ್ತು. ಈ ಫ್ಲೆಕ್ಸ್​ನಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ,  ಸಚಿವ ಆರ್​. ಅಶೋಕ್​, ಯಲಹಂಕ ಶಾಸಕ ಎಸ್​. ಆರ್​. ವಿಶ್ವನಾಥ್​, ಮರಿಸ್ವಾಮಿ ಹಾಗೂ ಎಸ್​. ಮಲ್ಲಯ್ಯರ ಭಾವಚಿತ್ರವನ್ನು ಹಾಕಲಾಗಿತ್ತು.

Join Whatsapp