ಮಾಸ್ಕ್ ಧರಿಸದ ತೇಜಸ್ವಿ ಸೂರ್ಯಗೆ ದಂಡ ವಿಧಿಸಿದ್ದೀರಾ? : ರಾಜ್ಯ ಸರಕಾರಕ್ಕೆ ಹೈಕೋರ್ಟ್ ತರಾಟೆ

Prasthutha|

ಮುಂಬೈ : ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜಕೀಯ ಮೆರವಣಿಗೆ ನಡೆಸಿದ್ದಾಗ ಮಾಸ್ಕ್ ಧರಿಸದಿರುವ ಬಗ್ಗೆ ಅವರಿಗೆ ದಂಡ ವಿಧಿಸಲಾಗಿದೆಯೇ? ಎಂದು ರಾಜ್ಯ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. ಸಿಜೆ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾ. ವಿಶ್ವಜೀತ್ ಶೆಟ್ಟಿ ರಾಜ್ಯ ಸರಕಾರವನ್ನು ಈ ಪ್ರಶ್ನೆ ಕೇಳಿದ್ದಾರೆ.

- Advertisement -

ಸೆ.30ರಂದು ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿ ವರೆಗೆ ತೇಜಸ್ವಿ ಸೂರ್ಯ ನಡೆಸಿದ್ದ ಮೆರವಣಿಗೆಯಲ್ಲಿ ಮಾಸ್ಕ್ ಧರಿಸಿರಲಿಲ್ಲ ಮತ್ತು ಕೋವಿಡ್ 19 ನಿಯಮಗಳನ್ನು ಪಾಲಿಸಿರಲಿಲ್ಲ. ಸೆಲೆಬ್ರಿಟಿಗಳಿಗೆ ಕೋವಿಡ್ ನಿಯಮಗಳನ್ನು ಜಾರಿಗೊಳಿಸುತ್ತಿಲ್ಲ, ಜನ ಸಾಮಾನ್ಯರಿಗೆ ಮಾತ್ರ ದಂಡ ವಿಧಿಸಲಾಗುತ್ತಿದೆ ಎಂದು ಆಪಾದಿಸಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಕೋರ್ಟ್ ಈ ಅಂಶಗಳನ್ನು ಪ್ರಸ್ತಾಪಿಸಿದೆ.

ನ್ಯಾಯವಾದಿ ಜಿ.ಆರ್. ಮೋಹನ್ ಕೋರ್ಟ್ ಗೆ ಸಲ್ಲಿಸಿದ್ದ ಫೋಟೊಗಳನ್ನು ಗಮನಿಸಿದ ಕೋರ್ಟ್ ಸರಕಾರವನ್ನು ಈ ರೀತಿ ಪ್ರಶ್ನಿಸಿತು. “ಮಾಸ್ಕ್ ಧರಿಸದ ಸಂಸದ (ತೇಜಸ್ವಿ ಸೂರ್ಯ) ಮತ್ತು ಇತರ ರಾಜಕೀಯ ನಾಯಕರಿಂದ ದಂಡ ಸಂಗ್ರಹಿಸಿದ್ದೀರಾ? ಏನು ಸಂದೇಶ ನೀಡಲು ಹೊರಟಿದ್ದೀರಿ ನೀವು?’’ ಎಂದು ಕೋರ್ಟ್ ಪ್ರಶ್ನಿಸಿದೆ.

- Advertisement -

ಸಂಸದರು ಸೇರಿದಂತೆ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ ಎಂಬುದು ಫೋಟೊದಲ್ಲಿ ಸ್ಪಷ್ಟವಾಗಿ ಕಾಣುತ್ತಿರುವಾಗ, ರಾಜಕಾರಣಿಯು ಮಾಸ್ಕ್ ಧರಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಗೆ ವರದಿ ಸಲ್ಲಿಸಲು ಸಾಧ್ಯ?. ಪೊಲೀಸ್ ಅಧಿಕಾರಿಯಾಗಿ ಈ ರೀತಿ ಯಾಕೆ ವರದಿ ಸಲ್ಲಿಸಿದ್ದೀರಿ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ.9ಕ್ಕೆ ವಿಚಾರಣೆ ಮುಂದೂಡಲಾಗಿದೆ.  

ತೇಜಸ್ವಿ ಸೂರ್ಯ ಮಾಸ್ಕ್ ಧರಿಸದೆ, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮೆರವಣಿಗೆ ನಡೆಸಿದ್ದ ಫೋಟೊಗಳು ವೈರಲ್ ಆಗಿದ್ದವು. ಆದರೆ, ಡಿಸಿಪಿಯೊಬ್ಬರು ಮೆರವಣಿಗೆಯಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲಾಗಿದೆ ಎಂದು ವರದಿ ಸಲ್ಲಿಸಿದ್ದರು.

Join Whatsapp