ನವದೆಹಲಿ: ಇತ್ತೀಚೆಗೆ ಬಿಜೆಪಿ ಪ್ರೊಪಗ್ಯಾಂಡಗಳ ವಿರುದ್ಧ ಸಮರ ಸಾರಿರುವ ದೇಶದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, ಕನ್ನಡ ಸೇರಿ ಐದು ಭಾಷೆಗಳಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ.
ಧ್ರುವ್ ರಾಠಿ ಇತ್ತೀಚೆಗೆ ಬಿಡುಗಡೆಗೊಳಿಸಿದ್ದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಅದ್ಭುತ ವೀಕ್ಷಣೆಯನ್ನು ಹೊಂದಿದೆ. ಅದನ್ನು ಹಲವಾರು ಮಂದಿ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ವಿಪಕ್ಷಗಳ ನಡುವಿನ ಹಲವು ವಿಚಾರಗಳಿಗೆ ಸ್ಪಷ್ಟ ರೂಪವನ್ನು ಈ ವೀಡಿಯೊ ನೀಡಿತ್ತು. ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆ ಗೆಲ್ಲಲು ವಿಪಕ್ಷಗಳನ್ನು ಹೇಗೆ ಕಟ್ಟಿ ಹಾಕಿದೆ? ಉನ್ನತ ತನಿಖಾ ಸಂಸ್ಥೆಗಳನ್ನು ಹೇಗೆ ದುರ್ಬಳಕೆ ಮಾಡಿದೆ ಎನ್ನುವ ಬಗ್ಗೆ ದಾಖಲೆ ಸಹಿತವಾಗಿ ಎಳೆ ಎಳೆಯಾಗಿ ಧ್ರುವ್ ರಾಠಿ ವಿವರಿಸಿದ್ದರು.
ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಬ್ಲಾಕ್ ಮಾಡಿರುವುದು ಹೇಗೆ, ರಾಹುಲ್ ಗಾಂಧಿ ಅವರನ್ನು ತಡೆಯಲು ಬಿಜೆಪಿ ಮಾಡಿದ್ದೇನ, ಎಲೆಕ್ಷನ್ ಬಾಂಡ್ಗಳು ರಾಜಕೀಯ ನಾಯಕರ ಬಂಧನಕ್ಕೆ ಹೇಗೆ ಕಾರಣವಾಗಿದೆ ಎನ್ನುವುದನ್ನು ಧ್ರುವ್ ರಾಠಿ ಆಧಾರಗಳೊಂದಿಗೆ, ಸರಳವಾಗಿ ಅರ್ಥವಾಗುವ ಹಾಗೆ, ಆಕರ್ಷಕ ನಿರೂಪಣೆಯೊಂದಿಗೆ ತಮ್ಮ ಪ್ರಮುಖ ಹಿಂದಿ ಚಾನೆಲ್ನಲ್ಲಿ ವಿವರಿಸಿದ್ದರು.