ಬೆಂಗಳೂರು: ಪ್ರತಿ ದಿನ 1 ಠಾಣೆಗೆ ಭೇಟಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೂಚನೆ ನೀಡಿದ್ದಾರೆ.
ಕಮಿಷನರ್, ಐಜಿಪಿ, ಡಿಐಜಿಪಿ, ಎಸ್ಪಿಗಳಿಗೆ ಪ್ರತಿ ದಿನ ನಿಮ್ಮ ವ್ಯಾಪ್ತಿಯ ಒಂದು ಠಾಣೆಗೆ ದಿಢೀರ್ ಭೇಟಿ ನೀಡಬೇಕು ಎಂದಿದ್ದಾರೆ. ಆ ಮೂಲಕ ಪೊಲೀಸರ ಕಾರ್ಯವೈಖರಿ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ. ಭದ್ರತೆಗೆ ನಿಯೋಜನೆಯಾಗಿದ್ದರೆ ಅಧಿಕಾರಿಗಳ ಸಂಪರ್ಕದಲ್ಲಿ ಇರಬೇಕು ಎಂದು ಹೇಳಿದ್ದಾರೆ.
ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್ಗಳ ಜೊತೆಗೂ ಸಂವಹನ ನಡೆಸಿ. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ಜೊತೆ ಚರ್ಚೆ ನಡೆಸಬೇಕು. ಕಮಿಷನರ್, ಎಸ್ಪಿ ವಾರದಲ್ಲಿ ಒಂದು ದಿನ ನೈಟ್ ರೌಂಡ್ಸ್ ಮಾಡಬೇಕು. ನೈಟ್ ಬೀಟ್ ಸಿಬ್ಬಂದಿ ಕಾರ್ಯವೈಖರಿ ಪರಿಶೀಲಿಸಲು ದಿಢೀರ್ ಭೇಟಿ ನೀಡಿ ಎಂದು ತಿಳಿಸಿದ್ದಾರೆ.
ಕರ್ನಾಟಕದ ನೂತನ ಡಿಜಿ ಹಾಗೂ ಐಜಿಪಿಯಾಗಿ ಅಲೋಕ್ ಮೋಹನ್ ಅವರು ಮೇ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ್ದರು. ಬಿಹಾರ ಮೂಲದ ಡಾ. ಅಲೋಕ್ ಮೋಹನ್ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರು 1987ನೇ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, 36 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಈ ಮೊದಲು ಅಗ್ನಿಶಾಮಕ ದಳ, ತುರ್ತು ಸೇವೆಗಳ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಾರಾಗೃಹ ಡಿಜಿಪಿ, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತ, ಎಸಿಬಿ ಎಡಿಜಿಪಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2025ರ ಏಪ್ರಿಲ್ನಲ್ಲಿ ನಿವೃತ್ತರಾಗಲಿದ್ದಾರೆ.