ಟಿ20 ಕ್ರಿಕೆಟ್‌ | 13 ಬೌಂಡರಿ, 13 ಸಿಕ್ಸರ್‌, 57 ಎಸೆತಗಳಲ್ಲಿ 162 ರನ್‌, ಡೆವಾಲ್ಡ್‌ ಬ್ರೆವಿಸ್‌ ವಿಶ್ವದಾಖಲೆ !

Prasthutha|

ಪಾಟ್‌ಶೆಫ್‌ಸ್ಟೋರ್ಮ್‌: ಜೂನಿಯರ್‌ ಎಬಿಡಿ ವಿಲಿಯರ್ಸ್‌ ಎಂದೇ ಖ್ಯಾತಿವೆತ್ತ 19 ವರ್ಷದ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಡೆವಾಲ್ಡ್‌ ಬ್ರೆವಿಸ್‌, ಕ್ರಿಕೆಟ್‌ ಲೋಕವನ್ನೇ ಅಚ್ಚರಿಯಲ್ಲಿ ಕೆಡವಿದ್ದಾರೆ. ʻಕ್ರಿಕೆಟ್‌ ಸೌಥ್‌ ಆಫ್ರಿಕಾ ಟಿ20 ಚಾಲೆಂಜ್‌ʼ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಬ್ರೆವಿಸ್‌ ಕೇವಲ 52 ಎಸೆತಗಳಲ್ಲಿ 150 ರನ್‌ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

- Advertisement -

ಪಾಟ್‌ಶೆಫ್‌ಸ್ಟೋರ್ಮ್‌ನಲ್ಲಿರುವ ಸೆನ್ವೆಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೈಟನ್ಸ್‌ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಡೆವಾಲ್ಡ್‌ ಬ್ರೆವಿಸ್‌, ನೈಟ್ಸ್‌ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಸಿಕ್ಸರ್‌-ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ ಬ್ರೆವಿಸ್‌, ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದರು. ಟಿ20 ಕ್ರಿಕೆಟ್‌ನಲ್ಲಿ ಬ್ರವಿಸ್‌ ಬ್ಯಾಟ್‌ನಿಂದ ದಾಖಲಾದ ಮೊದಲ ಶತಕ ಇದಾಗಿದೆ.  ಆ ಬಳಿಕ ಕೇವಲ 52 ಎಸೆತಗಳಲ್ಲಿ 150 ರನ್‌ ಪೂರ್ತಿಗೊಳಿಸಿದರು. ಇದು ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಅತಿ ವೇಗದ 150 ರನ್‌ ಆಗಿದೆ. ಅಲ್ಲದೆ ಟಿ20 ಕ್ರಿಕೆಟ್‌ನ ಮೂರನೇ ವೈಯಕ್ತಿಕ ಗರಿಷ್ಠ ಮೊತ್ತ ಎಂಬ ದಾಖಲೆಯನ್ನೂ ಬ್ರೆವಿಸ್‌ ತಮ್ಮದಾಗಿಸಿಕೊಂಡರು.

ಒಟ್ಟು 57 ಎಸೆತಗಳನ್ನು ಎದುರಿಸಿದ ʻಜೂನಿಯರ್‌ ಎಬಿಡಿʼ 162 ರನ್‌ಗಳಿಸಿ ಅಂತಿಮ ಓವರ್‌ನ 3ನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿ ಮರಳಿದರು. 97 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡಿದ್ದ ಬ್ರೆವಿಸ್‌,  ತಲಾ 13 ಬೌಂಡರಿ ಮತ್ತು 13 ಸಿಕ್ಸರ್‌ಗಳನ್ನು ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದರು.

- Advertisement -

ದಕ್ಷಿಣ ಆಫ್ರಿಕಾ ಮೊದಲನೇ ಹಾಗೂ ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ದಾಖಲಿಸಿದ ಮೂರನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಡೆವಾಲ್ಡ್‌ ಬ್ರೆವಿಸ್‌ ಈ ಮೂಲಕ ಪಾತ್ರರಾಗಿದ್ದಾರೆ. ವೆಸ್ಟ್‌ ಇಂಡೀಸ್‌ ದೈತ್ಯ ಕ್ರಿಕೆಟಿಗ ಕ್ರಿಸ್‌ ಗೇಲ್‌ ಮತ್ತು ಆರೊನ್‌ ಫಿಂಚ್‌ ಮೊದಲ ಎರಡು ಸ್ಥಾನಗಳಲ್ಲಿ ಇದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ದಾಖಲಿಸಿದವರ ಪಟ್ಟಿ

ಕ್ರಿಸ್ ಗೇಲ್ (ಆರ್‌ಸಿಬಿ), 175* ರನ್‌, (66 ಎಸೆತ) vs ಪುಣೆ ವಾರಿಯರ್ಸ್  2013

ಆರನ್ ಫಿಂಚ್ (ಆಸ್ಟ್ರೇಲಿಯಾ) 172 ರನ್‌, (76 ಎಸೆತ) vs ಝಿಂಬಾಬ್ವೆ, 2018

ಹ್ಯಾಮಿಲ್ಟನ್‌ ಮಝಕಡ್ಜ, 162* ರನ್‌ (71 ಎಸೆತ) –  2016

ಹಝರತ್‌ಉಲ್ಲಾ ಝಜಾಯ್, 162* ರನ್‌ (62 ಎಸೆತ) –  2019

ಡೆವಾಲ್ಡ್‌ ಬ್ರೆವಿಸ್‌, 162 ರನ್‌ (57 ಎಸೆತ) –  2022

ಅತ್ಯಂತ ಕಿರಿಯ ದಕ್ಷಿಣ ಆಫ್ರಿಕಾದ ಆಟಗಾರ

ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಅತ್ಯಂತ ಕಿರಿಯ ಆಟಗಾರ (19 ವರ್ಷ, 185 ದಿನ) ಎಂಬ ಕೀರ್ತಿಯು ಇದೀಗ ಡೆವಾಲ್ಡ್‌ ಬ್ರೆವಿಸ್‌ ಪಾಲಾಗಿದೆ.  ಆ ಮೂಲಕ ಡಿ ಕಾಕ್‌ರನ್ನು ಹಿಂದಿಕ್ಕಿದ್ದಾರೆ. 2013 ರಲ್ಲಿ ಕೇಪ್ ಕೋಬ್ರಾಸ್ ವಿರುದ್ಧ ಅಜೇಯ 126 ರನ್ ಗಳಿಸಿದ್ದರು. (20 ವರ್ಷ  62 ದಿನ). ಒಟ್ಟಾರೆಯಾಗಿ ಈ ಪಟ್ಟಿಯಲ್ಲಿ ಬ್ರೆವಿಸ್ ಆರನೇ-ಕಿರಿಯ ಬ್ಯಾಟರ್ ಎನಿಸಿದ್ದಾರೆ. ಈ ಬಾರಿಯ ಐಪಿಎಲ್‌  ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಿದ್ದ ಬ್ರೆವಿಸ್‌, 7 ಪಂದ್ಯಗಳಲ್ಲಿ 161 ರನ್‌ ಬಾರಿಸಿದ್ದರು.

ಡೆವಾಲ್ಡ್‌ ಬ್ರೆವಿಸ್‌ ಅವರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಟೈಟನ್ಸ್‌ ತಂಡ 20 ಓವರ್‌ಗಳಲ್ಲಿ 271 ರನ್‌ ಗಳಿಸಿತ್ತು. ಅದಾಗಿಯೂ ಸುಲಭವಾಗಿ ಸೋಲೊಪ್ಪಿಕೊಳ್ಳದ ನೈಟ್ಸ್‌ ತಂಡ 9 ವಿಕೆಟ್‌ ನಷ್ಟದಲ್ಲಿ 230 ರನ್‌ಗಳಿಸಿ 41 ರನ್‌ ಅಂತರದಲ್ಲಿ ಗೆಲುವಿನ ಗುರಿಯಿಂದ ದೂರ ಉಳಿಯಿತು.

ಬ್ರೆವಿಸ್‌ ಅವರ ಈ ಸ್ಪೋಟಕ ಇನಿಂಗ್ಸ್‌ ಕುರಿತು ಟ್ವೀಟ್‌ ಮಾಡಿರುವ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ’ವಿಲಿಯರ್ಸ್‌ ʻಡೆವಾಲ್ಡ್‌ ಬ್ರೆವಿಸ್‌, ಇದಕ್ಕಿಂತಲೂ ಹೆಚ್ಚೇನು ಹೇಳುವ ಅಗತ್ಯವಿಲ್ಲ,ʼ ಎಂದು ಬರೆದಿದ್ದಾರೆ.



Join Whatsapp