ಬೆಳಗಾವಿ: ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವ ನಿರ್ಧಾರ ನಮ್ಮ ಮುಂದಿಲ್ಲ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ.ಇದನ್ನು ವ್ಯವಸ್ಥಿತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಾನು ಊರಿನಲ್ಲಿ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ ಎಂದರೆ, ಅದಕ್ಕೆ ದೇವರಾಜು ಅರಸು ಅವರೇ ನೇರ ಕಾರಣ. ಹಾಗಾಗಿ, ಅವರ ಮೇಲೆ ಅಪಾರ ಗೌರವಿದೆ. ಅವರ ಹೆಸರಿನ ಸಂಸ್ಥೆಗಳ ಅಭಿವೃದ್ಧಿ ಜತೆಗೆ, ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲಾಗುವುದು ಎಂದು ತಿಳಿಸಿದರು.
ಇನ್ನೂ, ಹಲವಾರು ಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಕೆಲವರು ಪ್ರತಿಭಟನೆ ನಡೆಸಿದ್ದಾರೆ.ಆದರೆ, ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಸಂಬಂಧ ಚರ್ಚೆ ನಡೆಸಲಿದೆ ಎಂದೂ ಸಚಿವರು ಹೇಳಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಹರಿಪ್ರಸಾದ್, ಕೆಲ ಪ್ರಬಲ ಜಾತಿಗಳಿಗೆ ಸರ್ಕಾರ ನಿಗಮ ಮಂಡಳಿ ತೆರೆದು ಅನುಕೂಲ ಮಾಡಿಕೊಟ್ಟಿದೆ.ಆದರೆ, ಹಿಂದುಳಿದ ವರ್ಗಗಳ ಯೋಜನೆ, ಸಂಸ್ಥೆಗಳ ಮೇಲೆ ಸಹಾಯ ಧನ ನೀಡಲು, ಕಾರ್ಯ ಚಟುವಟಿಕೆ ನಡೆಸಲು ನಿರ್ಲಕ್ಷ್ಯ ಮನೋಭಾವ ಹೊಂದಿದೆ ಎಂದು ತಿಳಿಸಿದರು.