ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ನಿಂದ ಪಾದಯಾತ್ರೆ

Prasthutha|

ಬೆಳಗಾವಿ: ಯುವ ಸಮುದಾಯದ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಪ್ರದೇಶ ಯುವ ಕಾಂಗ್ರೆಸ್ ಬೆಳಗಾವಿಯಲ್ಲಿ ಶುಕ್ರವಾರ ಬೆಳಗ್ಗೆ ಏರ್ಪಡಿಸಿದ್ದ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು.

- Advertisement -

ಪಾದಯಾತ್ರೆ ಉದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ರಾಜ್ಯ ಯುವ ಕಾಂಗ್ರೆಸ್ ನಿರುದ್ಯೋಗ ಸಮಸ್ಯೆ ವಿರುದ್ಧ ಹೋರಾಟ ಹಮ್ಮಿಕೊಂಡಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಅವರು ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ನಾವು ಉದ್ಯೋಗಕ್ಕೆ ಆಗ್ರಹಿಸಿ ಚಳವಳಿ ಮಾಡುತ್ತಿದ್ದೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೋಡುತ್ತೇವೆ ಎಂದ ಕೇಂದ್ರದ ಬಿಜೆಪಿ ಸರಕಾರ ನುಡಿದಂತೆ ನಡೆಯಲಿಲ್ಲ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಪದವೀಧರರೆಲ್ಲರೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ಈ ಸರ್ಕಾರದಿಂದ ನೆರವಾಗಿಲ್ಲ ಎಂದು ಹೇಳಿದರು.

ಅತಿಥಿ ಶಿಕ್ಷಕರಿಗೆ ಸಿಗುತ್ತಿರುವ ವೇತನಕ್ಕಿಂತ ನರೇಗಾ ಯೋಜನೆಯ ಕಾರ್ಮಿಕರ ಕೂಲಿಯೇ ಹೆಚ್ಚಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಿಮ್ಮ ಹೋರಾಟ ಅರ್ಥಪೂರ್ಣ ಹೊರಾಟ, ಯುವಕರ ಕಣ್ಣು ತೆರೆಸುವ ಹೋರಾಟ. ಇಡೀ ರಾಜ್ಯ ಕಾಂಗ್ರೆಸ್ ಈ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದರು.

- Advertisement -

ಕೋವಿಡ್ ಸಮಯದಲ್ಲಿ ಉದ್ಯೋಗ ಕಡಿಮೆಯಾಗಿದೆ. ಬಿಜೆಪಿ ಸರ್ಕಾರದಿಂದ ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. ದೇಶದ ಯುವಕರು ಪಕೋಡ  ಮಾರಿಕೊಂಡು ಬದುಕಿರಿ ಎಂದು ಹೇಳುತ್ತಾರೆ. ಪಕೋಡ ಮಾರೋಣ ಎಂದರೆ ಅಡುಗೆ ಎಣ್ಣೆ ಲೀಟರ್ ಗೆ 200 ರೂ. ಆಗಿದೆ. ಈ ಯುವಕರು ತಮ್ಮ ಪದವಿ ಪ್ರಮಾಣ ಪತ್ರದ ಪ್ರತಿಯನ್ನು ಪ್ರಧಾನಮಂತ್ರಿಗಳಿಗೆ ವಾಪಸ್ ಕಳುಹಿಸಿಕೊಡುವ ಕಾರ್ಯಕ್ರಮವನ್ನು ಯೂತ್ ಕಾಂಗ್ರೆಸ್ ಹಮ್ಮಿಕೊಳ್ಳಲಿದೆ. ಕೇಂದ್ರ ಸರ್ಕಾರ ಉದ್ಯೋಗ ನೀಡಬೇಕು ಅಥವಾ ಕನಿಷ್ಠ 9 ಸಾವಿರ ರೂಪಾಯಿಯಾದರೂ ಉದ್ಯೋಗ ಭತ್ಯೆ ನೀಡಬೇಕು. ಮುಂದಿನ ಚುನಾವಣೆಯಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಭತ್ಯೆ ನೀಡುವ ವಿಚಾರವನ್ನು ನಮ್ಮ ಪ್ರಣಾಳಿಕೆಯಲ್ಲಿ ಸೇರಿಸುವ ಚಿಂತನೆ ಮಾಡುತ್ತಿದ್ದೇವೆ. ಈ ಕುರಿತು ರಾಹುಲ್ ಗಾಂಧಿ ಅವರು ನ್ಯಾಯ್ ಯೋಜನೆ ಬಗ್ಗೆ ಸಂದೇಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಿರುದ್ಯೋಗ ವಿರುದ್ಧ ಕಾಂಗ್ರೆಸ್ ದೊಡ್ಡ ಹೋರಾಟ ಮಾಡಲಿದೆ ಎಂದು ಶಿವಕುಮಾರ್ ಹೇಳಿದರು.

ಅಧಿವೇಶನ ಸಮಯದಲ್ಲಿ ಪಕ್ಷ ಹೋರಾಟ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದು ನಮ್ಮ ಹೋರಾಟವಲ್ಲ. ಜನರ ಭಾವನೆಗೆ ತಕ್ಕಂತೆ ನಾವು ಹೆಜ್ಜೆ ಇಡುತ್ತಿದ್ದೇವೆ. ಅವರ ನೋವಿನಲ್ಲಿ ಭಾಗಿಯಾಗುತ್ತಿದ್ದೇವೆ, ಧ್ವನಿಯಾಗುತ್ತಿದ್ದೇವೆ. ರೈತರು ಸೇರಿದಂತೆ ಎಲ್ಲ ವರ್ಗದ ಬಗ್ಗೆ ಯೋಚಿಸುತ್ತಿದ್ದೇವೆ. ಕೋವಿಡ್ ಪರಿಹಾರ ಕೊಟ್ಟಿಲ್ಲ. ಎಲ್ಲರಿಗೂ ಉದ್ಯೋಗ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.

ರಮೇಶ್ ಕುಮಾರ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನನಗೆ ಆ ಬಗ್ಗೆ ಗೊತ್ತಿಲ್ಲ. ಆದರೆ ಗೃಹ ಸಚಿವರು ಕಾಂಗ್ರೆಸ್ ನವರು ತಮ್ಮನ್ನು ರೇಪ್ ಮಾಡುತ್ತಿದ್ದಾರೆ ಎಂದು ಹೇಳಿಕೆ ಕೊಟ್ಟಾಗ ವಿರೋಧ ಯಾಕೆ ಆಗಲಿಲ್ಲ? ಅತ್ಯಾಚಾರ ಆರೋಪಿಯನ್ನು ಮುಖ್ಯಮಂತ್ರಿಗಳು ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡುವುದಕ್ಕೆ ಯಾಕೆ ವಿರೋಧ ಮಾಡುತ್ತಿಲ್ಲ?’ ಎಂದು ಮರುಪ್ರಶ್ನಿಸಿದರು.

ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿನ ಸರ್ಕಾರಿ ಹುದ್ದೆಗಳ ನೇಮಕಾತಿಗಳನ್ನು ತಕ್ಷಣ ಆರಂಭಿಸಬೇಕು. ಉದ್ಯೋಗ ಸೃಷ್ಟಿಸದಿದ್ದರೆ ಮಾಸಿಕ 9,000 ರೂ ನಿರುದ್ಯೋಗ ಭತ್ಯೆ ಕೊಡಬೇಕು. ರಾಜ್ಯದಲ್ಲಿ 56.6 ಲಕ್ಷ ಪದವಿಧರರಿದ್ದು, ಅದರಲ್ಲಿ 34 ಲಕ್ಷ ಯುವಜನರು ನಿರುದ್ಯೋಗಿಗಳಿದ್ದಾರೆ. ಜತೆಗೆ ಕನ್ನಡಿಗರಿಗೆ ಶೇ 80 ರಷ್ಟು ಉದ್ಯೋಗ ಮೀಸಲಿಡಬೇಕು ಎಂದರು.

ಪ್ರಸ್ತುತ 30 ಸಾವಿರ ಶಿಕ್ಷಕರ ಕೊರತೆಯಿದ್ದು. ನೂತನ ಶಿಕ್ಷಣ ನೀತಿ ಜಾರಿಯಿಂದ ಈ ಪ್ರಮಾಣ 70 ಸಾವಿರಕ್ಕೆ ಏರಿದೆ. ಇಂತಹ ಸಂಕಷ್ಟದಲ್ಲಿ ಕೇವಲ 5 ಸಾವಿರ ಶಿಕ್ಷಕರ ನೇಮಕಾತಿಯಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ. ಹೊಸ ಕೈಗಾರಿಕಾ ನೀತಿಯಿಂದ ಸೃಷ್ಟಿಯಾಗಿರುವ ಉದ್ಯೋಗದ ಬಗ್ಗೆಯೂ ಮಾಹಿತಿ ನೀಡಿಲ್ಲ.  ಹೀಗಾಗಿ ವಿದ್ಯಾರ್ಥಿಗಳು  ವೃತ್ತಿಪರ ಕೋರ್ಸ್ ಗಳಿಗೆ ಬ್ಯಾಂಕ್ ನಿಂದ ಪಡೆದ ಸಾಲವನ್ನು ಮನ್ನಾ ಮಾಡಬೇಕು. ಏರಿಕೆ ಮಾಡಿರುವ ವೃತ್ತಿ ಶಿಕ್ಷಣ ಶುಲ್ಕವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಗೆಜೆಟೆಡ್ ಪ್ರೊಬೇಷನರ್ಸ್‌ (ಕೆ.ಎ.ಎಸ್ ) ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ವಿವಿಧ ಇಲಾಖೆಯಲ್ಲಿ ಎಸ್‌ಡಿಎ ಮತ್ತು ಎಫ್‌ಡಿಎ ಹುದ್ದೆಗಳನ್ನು ತುಂಬಲು ಒತ್ತು ನೀಡಬೇಕು.  ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಯನ್ನು ತಕ್ಷಣವೇ ಆರಂಭಿಸಬೇಕು. ಹಿಂದುಳಿದ ವರ್ಗ ಪಿ.ಹೆಚ್.ಡಿ ವಿದ್ಯಾರ್ಥಿಗಳ ಶಿಷ್ಯ ವೇತನ ಸರ್ಕಾರ ತಡೆಹಿಡಿದಿದ್ದು ಅದನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಕ್ರೀಡಾಸಕ್ತರನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ಎಂ.ಎಸ್. ರಕ್ಷಾ ರಾಮಯ್ಯ ಹೇಳಿದರು.

ಸಹಸ್ರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಡೊಳ್ಳು ಭಾರಿಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಸುವರ್ಣ ಸೌಧದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಹಂತದಲ್ಲಿ ವಾಗ್ದಾದ ನಡೆಸಿದರು. ಬಳಿಕ ರಕ್ಷಾ ರಾಮಯ್ಯ ಸೇರಿ ಐವರು ನಿರುದ್ಯೋಗ ಭತ್ಯೆ ನೀಡುವಂತೆ ತಾಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Join Whatsapp