ಜಿಲ್ಲಾಧಿಕಾರಿ, ಜಿಪಂ ಸಿಇಒ ಸಭೆ ಕರೆದ ಮುಖ್ಯಮಂತ್ರಿ

Prasthutha|

ಹುಬ್ಬಳ್ಳಿ: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ದೃಷ್ಟಿಯಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕರ ಮಹತ್ವದ ಸಭೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ.

- Advertisement -

 ಗುರುವಾರ ಹಾಗೂ ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಸಭೆ ನಡೆಯಲಿದ್ದು, ಆಡಳಿತ ಯಂತ್ರಕ್ಕೆ ಚುರುಕು ನೀಡುವುದು ತಮ್ಮ ಗುರಿ ಎಂದು ಸ್ವತ: ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವದ ಬಗ್ಗೆ ಮೊದಲಿನಿಂದಲೂ ವರಿಷ್ಠರಿಗೆ ಸ್ಪಷ್ಟತೆ ಇದೆ ಮತ್ತು ಈ ಸ್ಪಷ್ಟತೆಯನ್ನು ಹಿರಿಯ ನಾಯಕರಾದ ಅರುಣ್ ಸಿಂಗ್ ಅವರು ಎತ್ತಿ ತೋರಿಸಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

- Advertisement -

ಪಕ್ಷದ ವರಿಷ್ಟರು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟಿದ್ದಾರೆ. ಮುಂದಿನ ಚುನಾವಣೆಗಾಗಿ ಪಕ್ಷ ಮತ್ತು ಸರ್ಕಾರವನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಅವರ ಈ ವಿಶ್ವಾಸಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಹಾಗೆಯೇ ಅವರ ನಿರೀಕ್ಷೆಯನ್ನು ಈಡೇರಿಸಲು ಶ್ರಮವಹಿಸಿ ದುಡಿಯುತ್ತೇವೆ ಎಂದು ಹೇಳಿದರು.

ಪಕ್ಷ ಹಾಗೂ ಸರ್ಕಾರವನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುವ ಎಲ್ಲ ಪ್ರಯತ್ನವನ್ನು ಮಾಡುತ್ತೇವೆ. ಈ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಟರಿಂದ ಯಾವ ಸೂಚನೆಯೂ ಬಂದಿಲ್ಲ ಎಂದ ಅವರು,ವರಿಷ್ಟರನ್ನು ಭೇಟಿ ಮಾಡಲು ಸಧ್ಯಕ್ಕೆ ದೆಹಲಿಗೆ ಹೋಗುವುದಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸ್ಪಷ್ಟ ಪಡಿಸಿದರು.

ಬೆಳಗಾವಿಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಹೋಗಿರುವ ಕುರಿತು ಪ್ರತಿಕ್ರಿಯಿಸಿದ ಅವರು,ಯಾರು ಎಲ್ಲಿಗೆ ಬೇಕಾದರೂ ಹೋಗುವ ಸ್ವಾತಂತ್ರ್ಯವಿದೆ ಎಂದರು.

ಒಮಿಕ್ರಾನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್ ಕರ್ಪ್ಯೂ ವಿಧಿಸಿದ ಸರ್ಕಾರದ ಕ್ರಮದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂಬ ಮಾತುಗಳ ಬಗ್ಗೆ ಉತ್ತರಿಸಿದ ಅವರು, ಗುರುವಾರ ಬೆಂಗಳೂರಿಗೆ ಹೋದ ನಂತರ ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

ಮಂಡಿನೋವಿಗಾಗಿ ತಮಗೆ ಚಿಕಿತ್ಸೆ ನೀಡಿದ ಲೋಕೇಶ್ ಎಂಬುವವರ ಮೇಲೆ ದಾಳಿಯಾಗಿತ್ತು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಲೋಕೇಶ್ ಅವರ ಬಗ್ಗೆ ನನಗೆ ಗೊತ್ತಿಲ್ಲ.ನನಗೆ ಆ ಬಗ್ಗೆ ಸ್ನೇಹಿತರ್ಯಾರೋ ಹೇಳಿದ್ದರು.ಆದರೆ ನಾನು ಒಪ್ಪಿರಲಿಲ್ಲ. ಈಗಲೂ ಅದು ದೊಡ್ಡ ವಿಷಯವಲ್ಲ ಎಂದು ನುಡಿದರು.

ಕಾರ್ಮಿಕ ಇಲಾಖೆ ಅದ್ಭುತವಾಗಿ ಕೆಲಸ ಮಾಡುತ್ತಿದ್ದು ಈಗಾಗಲೇ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ರಾಜ್ಯದ ಎಂಟು ಕಡೆ ಕಾರ್ಮಿಕ ಭವನಗಳನ್ನು ನಿರ್ಮಿಸಿದ್ದು ಈಗ ಒಂಭತ್ತನೆಯ ಭವನವನ್ನೂ ನಿರ್ಮಿಸಿದೆ.ಕ್ರಮೇಣ ಎಲ್ಲ ಕಡೆ ಕಾರ್ಮಿಕ ಭವನಗಳನ್ನು ನಿರ್ಮಿಸಲಿದೆ ಎಂದು ವಿವರಿಸಿದರು.



Join Whatsapp