ಬೆಂಗಳೂರು:ಡೆಂಗ್ಯೂ ರಾಜ್ಯಾದ್ಯಂತ ಉಲ್ಬಣಗೊಳ್ಳುತ್ತಿದ್ದು, ಈ ಸೋಂಕು ಪರೀಕ್ಷೆಗೆ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಶುಲ್ಕ ವಸೂಲು ಮಾಡುತ್ತಿರುವ ಕುರಿತು ಇಲಾಖೆಗೆ ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಏಕರೂಪ ದರ ನಿಗದಿಪಡಿಸಲು ಮುಂದಾಗಿದೆ ಎಂದು ಆರೋಗ್ಯ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಭೆಯ ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ವಿಷಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗ್ಯೂ ಪರೀಕ್ಷೆಯನ್ನೇ ಖಾಸಗಿ ಆಸ್ಪತ್ರೆಗಳು, ಲ್ಯಾಬ್‌ಗಳು ಬಂಡವಾಳ ಮಾಡಿಕೊಳ್ಳುತ್ತಿವೆ. ಬಡ ರೋಗಿಗಳ ಸುಲಿಗೆ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ಆರೋಪ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶೀಘ್ರದಲ್ಲೇ ದರ ನಿಗದಿ ಮಾಡಿ ಅಧಿಸೂಚನೆ ಹೊರಡಿಸುವುದಾಗಿ ಹೇಳಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಟೆಸ್ಟಿಂಗ್ ಕಿಟ್‌ಗಳನ್ನು ಉಚಿತವಾಗಿ ಕೊಡಲಾಗುತ್ತಿದೆ ಎಂದೂ ಅವರು ತಿಳಿಸಿದರು.
ಡೆಂಗ್ಯೂ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇದುವರೆಗೆ ಏನಾಗಿದೆ, ಮುಂದೇನಾಗಬೇಕು ಎಂದು ಚರ್ಚೆ ಮಾಡಿದ್ದೇವೆ. ಸಾಧಾರಣವಾಗಿ ಈ ವರ್ಷ ಬಂದರೆ ಮುಂದಿನ ವರ್ಷ ಬರುತ್ತಿರಲಿಲ್ಲ. ಆದರೆ, ಕಳೆದ ಬಾರಿಯೂ ಡೆಂಗ್ಯೂ ಇತ್ತು, ಈ ಬಾರಿ ಜಾಸ್ತಿ ಆಗಿದೆ ಎಂದರು.
ಜು.1 ರವರೆಗೆ 6187 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಕಳೆದ ಬಾರಿ 2903 ಪಾಸಿಟಿವ್ ಪ್ರಕರಣ ವರದಿಯಾಗಿದ್ದವು. ಪರೀಕ್ಷೆ ಜಾಸ್ತಿ ಮಾಡಿರುವುದರಿಂದ ಪ್ರಕರಣ ಕೂಡ ಹೆಚ್ಚು ಬೆಳಕಿಗೆ ಬರುತ್ತಿವೆ. ಶೇ.47 ರಷ್ಟು ತಪಾಸಣೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.