ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಯಂತ್ರೋಪಕರಣ ತಯಾರಿಕೆ ಹಾಗೂ ಬ್ಯಾಟರಿಕೋಶಗಳ ಮರುಬಳಕೆ ಸಂಗ್ರಹಣಾ ಕೇಂದ್ರ ಸ್ಥಾಪಿಸಲು ಒಟ್ಟು 1,040 ಕೋಟಿ ರೂ. ಬಂಡವಾಳ ಹೂಡಿಕೆಯ ಎರಡು ಒಪ್ಪಂದಗಳಿಗೆ ವಿದೇಶದಲ್ಲಿ ಸಹಿ ಹಾಕಲಾಗಿದೆ.
ಮಷಿನ್‌ಟೂಲ್ಸ್ ಮತ್ತು ಕೈಗಾರಿಕಾ ಯಂತ್ರೋಪಕರಣ ತಯಾರಿಸುವ ಡಿಎನ್ ಸೊಲುಷನ್ಸ್ ಕಂಪನಿಯು ಒಂದು ಸಾವಿರ ಕೋಟಿ ರೂ. ಹೂಡಿಕೆಗೆ ರಾಜ್ಯ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡಿದೆ. ಬೆಂಗಳೂರು ಬಳಿಯ ಮಾಹಿತಿ ತಂತ್ರಜ್ಞಾನ ಪ್ರದೇಶದಲ್ಲಿ ಈ ಕಂಪನಿ ತಯಾರಿಕಾ ಘಟಕ ಸ್ಥಾಪಿಸಲಿದೆ.
ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಬಿಡಿಭಾಗಗಳನ್ನು ತಯಾರಿಸುವ ಇಎಂಎನ್‌ಐ ಕಂಪನಿಯು ಬ್ಯಾಟರಿಕೋಶಗಳ ದಾಸ್ತಾನು ಹಾಗೂ ಬ್ಯಾಟರಿ ಕೋಶಗಳ ಮರುಬಳಕೆ ಸಂಗ್ರಹಣಾ ಕೇಂದ್ರವನ್ನು 40 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಿದ್ದು, ಅದಕ್ಕಾಗಿ ರಾಜ್ಯ ಸರ್ಕಾರದ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಲು ವಿದೇಶಕ್ಕೆ ತೆರಳಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ನೇತೃತ್ವದ ನಿಯೋಗ ದಕ್ಷಿಣ ಕೊರಿಯಾ ಪ್ರವಾಸದಲ್ಲಿದೆ. ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಡಿಎನ್ ಸೊಲ್ಯುಷನ್ಸ್ ಕಂಪನಿಯ ಅಧ್ಯಕ್ಷ ಸಂಘುನ್ ಕಿಮ್ ಜತೆಗೆ ಸಚಿವ ಎಂ.ಬಿ.ಪಾಟೀಲ ಒಪ್ಪಂದ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಇದ್ದರು.
ದಕ್ಷಿಣ ಕೊರಿಯಾ ರಾಜಧಾನಿ ಸೋಲ್‌ನಲ್ಲಿ ಮಂಗಳವಾರ ರೋಡ್ ಷೋ ನಡೆಯಿತು. 45ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಕರ್ನಾಟಕದ ಕೈಗಾರಿಕೆ ಅಭಿವೃದ್ಧಿಗೆ ಉದ್ಯಮಿಗಳು ಹಾಗೂ ಬಂಡವಾಳ ಹೂಡಿಕೆದಾರರು ಕೈಜೋಡಿಸಿದರು.