ಬೆಳಗಾವಿ : ಹೊಸ ವರ್ಷದ ಮೊದಲ ದಿನ ಇಂದು ರಾಜ್ಯದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ಕೇಳಿ ಬಂದಿದೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಿ ಮಾಡುವಂತೆ ಹೀರೇಬಾಗೇವಾಡಿಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಧ್ವಜ ಹಾರಿಸುವ ಮೂಲಕ ಒತ್ತಾಯಿಸಲಾಗಿದೆ.
ಬೆಳಗಾವಿಯ ಹೀರೇಬಾಗೇವಾಡಿಯಲ್ಲಿ ಉತ್ತರ ಕರ್ನಾಟಕ ರಾಜ್ಯ ಹೋರಾಟ ಸಮಿತಿಯಿಂದ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲಾಗಿದೆ. ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಅಡಿವೇಶ್ ಇಟಗಿ ನೇತೃತ್ವದಲ್ಲಿ ಪ್ರತ್ಯೇಕ ಧ್ವಜಾರೋಹಣ ನಡೆದಿದೆ.
ಪ್ರತ್ಯೇಕ ಧ್ವಜಾರೋಹಣ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದುದನ್ನು ಕಂಡಾಗ ರಾಷ್ಟ್ರಗೀತೆ ಹಾಡಿದ ಹೋರಾಟಗಾರರು, ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಪೊಲೀಸರು ನಿಂತ ವೇಳೆಯಲ್ಲಿಯೇ ಪ್ರತ್ಯೇಕ ಧ್ವಜಾರೋಹಣ ಮಾಡಿದ್ದಾರೆ.
ಧ್ವಜಾರೋಹಣಕ್ಕೆ ಬಳಸಲಾದ ಧ್ವಜವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.