ಉಡುಪಿ : ದೇಶಕ್ಕೆ ವಿಶ್ವಾಸಾಘಾತ ಮಾಡಿದ ಆರೋಪದಲ್ಲಿ ‘ರಿಪಬ್ಲಿಕ್’ ಟಿ.ವಿ.ಯ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ(SDPI), ಉಡುಪಿ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ನಗರದ ಅಜ್ಜರಕಾಡುವಿನ ಹುತಾತ್ಮರ ಸ್ಮಾರಕ ಭವನದ ಮುಂದೆ ಪ್ರತಿಭಟನೆ ನಡೆಯಿತು.
ಪ್ರಸ್ತಾವಿಕ ಭಾಷಣಮಾಡಿದ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಉಚ್ಚಿಲ, ಇಂತಹ ನಕಲಿ ಪತ್ರಕರ್ತರು ದೇಶದ ಅಂತರಿಕ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದರು. ನಕಲಿ ರಾಷ್ಟ್ರಿಯವಾದಿ ಪತ್ರಕರ್ತ ಅರ್ನಾಬ್ ನನ್ನು ತಕ್ಷಣವೇ ಬಂಧಿಸಿ, ಆತನ ವಿರುದ್ದ ಮಹಾರಾಷ್ಟ್ರ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ, ಉಡುಪಿ ಜಿಲ್ಲಾಧ್ಯಕ್ಷರಾದ ಇಲ್ಯಾಸ್ ಸಾಸ್ತಾನ ದಿಕ್ಕ್ಸೂಚಿ ಭಾಷಣಮಾಡಿ, ಫೆಬ್ರುವರಿ 26, 2019ರಲ್ಲಿ ನಡೆದ ಬಾಲಾಕೋಟ್ ದಾಳಿಗೆ ಮೊದಲೇ ಪತ್ರಕರ್ತ ಅರ್ನಾಬ್ ಗೆ ರಹಸ್ಯ ಮೂಲದಿಂದ ಮಾಹಿತಿ ಬಂದಿದೆ. ತನ್ನ ಟಿ.ವಿ. ಚಾನಲ್ ನ ಟಿಆರ್ ಪಿಗಾಗಿ ರಾಷ್ಟ್ರದೊಂದಿಗೆ ಆಟ ಆಡಿರುವ ಆತ, ಸರ್ಕಾರದ ರಹಸ್ಯ ಬಿಟ್ಟುಕೊಟ್ಟಿದ್ದಾನೆ ಎಂದು ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ವಹಾಬ್ ಮೂಳೂರು, ರಫೀಕ್ ಪೊಲಿಪು, ಶಂಶುದ್ದಿನ್ ಎಸ್.ಕೆ. ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶ್ರಫ್ ನಿರೂಪಿಸಿ, ವಂದಿಸಿದರು ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದರು.