ದೆಹಲಿ: ದೆಹಲಿ ಮೇಯರ್ ಹುದ್ದೆಗೆ ಶೆಲ್ಲಿ ಒಬೆರಾಯ್ ಅವರ ಹೆಸರನ್ನು ಆಮ್ ಆದ್ಮಿ ಪಕ್ಷ ಘೋಷಿಸಿದೆ. ಅದೇ ರೀತಿ ಉಪ ಮೇಯರ್ ಹುದ್ದೆಗೆ ಆಲೆ ಮೊಹಮ್ಮದ್ ಇಕ್ಬಾಲ್ ಅವರ ಹೆಸರನ್ನು ನಾಮಾಂಕಿತಗೊಳಿಸಿದೆ. ಈ ಮೊದಲು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಶೆಲ್ಲಿ ಒಬೆರಾಯ್, ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಧಿಕಾರಕ್ಕೆ ಬಂದರೆ ಮಹಿಳೆಯನ್ನು ಮೇಯರ್ ಮಾಡುವುದಾಗಿ ಚುನಾವಣೆ ಸಮಯದಲ್ಲಿ ಆಪ್ ಘೋಷಿಸಿತ್ತು.
“39 ವರ್ಷದ ಒಬೆರಾಯ್ ದೆಹಲಿ ವಿಶ್ವವಿದ್ಯಾಲಯದ ಮಾಜಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ದೆಹಲಿ ಬಿಜೆಪಿ ಮಾಜಿ ಮುಖ್ಯಸ್ಥ ಆದೇಶ್ ಗುಪ್ತಾ ಅವರ ತವರು ಕ್ಷೇತ್ರವಾದ ಪೂರ್ವ ಪಟೇಲ್ ನಗರದಿಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಅಲ್ಲಿಂದ ಅಭ್ಯರ್ಥಿ ದೀಪಾಲಿ ಕಪೂರ್ ಅವರನ್ನು ಭಾರಿ ಅಂತರದಿಂದ ಸೋಲಿಸಿದರು. ಈ ಪ್ರದೇಶ ಇಲ್ಲಿಯವರೆಗೆ ಬಿಜೆಪಿ ಭದ್ರಕೋಟೆಯಾಗಿತ್ತು.
250 ವಾರ್ಡ್ ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 133 ವಾರ್ಡ್ ಗಳಲ್ಲಿ ಅಮೋಘ ಗೆಲುವು ಸಾಧಿಸುವ ಮೂಲಕ ಬಿಜೆಪಿಯಿಂದ ಅಧಿಕಾರ ಕಸಿದಿತ್ತು. ಬಿಜೆಪಿ 105 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕೇವಲ 8 ವಾರ್ಡ್ ಗಳಲ್ಲಿ ಜಯಗಳಿಸಿ ಮೂರನೇ ಸ್ಥಾನ ಪಡೆದುಕೊಂಡಿತ್ತು.