ನವ ದೆಹಲಿ : ವಿದ್ಯಾರ್ಥಿ ನಾಯಕರಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ ಜಾಮೀನು ನೀಡಿದ ಹೈಕೋರ್ಟ್ ಆದೇಶದ ವಿರುದ್ಧ ದೆಹಲಿ ಪೊಲೀಸರು ಬುಧವಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಯುಎಪಿಎ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಿರುವ ಮೂವರು ವಿದ್ಯಾರ್ಥಿ ನಾಯಕರು ಸುಮಾರು ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಆದರೆ ದೆಹಲಿ ಹೈಕೋರ್ಟ್ ಮಂಗಳವಾರ, ಈ ಮೂವರಿಗೆ ಜಾಮೀನು ನೀಡಿ ಬಿಡುಗಡೆಗೆ ಆದೇಶಿಸಿತ್ತು.
ವಿದ್ಯಾರ್ಥಿ ನಾಯಕರ ಬಿಡುಗಡೆ ವಿಳಂಬಗೊಳಿಸಲು, ಉದ್ದೇಶಪೂರ್ವಕವಾಗಿ ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ವಕೀಲರು ಆಪಾದಿಸಿದ ಮಧ್ಯೆಯೇ ದೆಹಲಿ ಪೊಲೀಸರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ ಜಾಮೀನು ರದ್ದುಗೊಳಿಸಲು ಮನವಿ ಮಾಡಿದ್ದಾರೆ. “ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರ ತನ್ನ ವಿರುದ್ಧದ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದೆ. ಅಭಿಪ್ರಾಯ ಭೇದವನ್ನು ಹತ್ತಿಕ್ಕುವ ಭರದಲ್ಲಿ ಸಂವಿಧಾನಬದ್ಧವಾದ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದನೆ ಇವರೆಡರ ನಡುವಿನ ಅಂತರವನ್ನು ಅರಿಯುವಲ್ಲಿ ಸರ್ಕಾರ ಸಂಪೂರ್ಣ ಕುರುಡುತನ ಪ್ರದರ್ಶಿಸಿದೆ. ಇಂತಹ ಮನಸ್ಥಿತಿಯು ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ನಿನ್ನೆ ಜಾಮೀನು ನೀಡುವಾಗ ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಮೂವರ ವಿಳಾಸಗಳನ್ನು ಪರಿಶೀಲಿಸಲು ವಿಳಂಬವಾಗುವುದರಿಂದ, ಅವರ ಬಿಡುಗಡೆಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಪೊಲೀಸರು ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದರು. ಮಾಜಿ ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್, ಸಾಮಾಜಿಕ ಕಾರ್ಯಕರ್ತ ಗೌತಮ್ ಭಾನ್ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ, ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ಹಲವು ಪ್ರೊಫೆಸರ್ ಗಳು ವಿದ್ಯಾರ್ಥಿಗಳಿಗೆ ಜಾಮೀನು ಭದ್ರತೆ ನೀಡಿದ್ದಾರೆ. ವಿದ್ಯಾರ್ಥಿಗಳ ಬಿಡುಗಡೆ ಪ್ರಕ್ರಿಯೆ ವಿಳಂಬ ಮಾಡಲು ಪೊಲೀಸರು ಅನಗತ್ಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪರ ವಕೀಲರು ಆರೋಪಿಸಿದ್ದರು.