ಮೋದಿ ತಿಗಣೆ ರೀತಿಯಲ್ಲಿ ಜನರ ರಕ್ತ ಹೀರುತ್ತಿದ್ದಾರೆ; ಸಿದ್ದರಾಮಯ್ಯ

Prasthutha|

ಬೆಂಗಳೂರು: ಮುಂದಿನ ಚುನಾವಣೆಯಲ್ಲಿಯೂ ಮೋದಿ ಮೋದಿ ಎಂದೇನಾದರೂ ಹೇಳಿದರೆ ಬಡವರ ಬದುಕು ಬೂದಿಯಾಗುವುದು ಖಚಿತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜಯನಗರ ವಿಧಾನಸಭೆ ಕ್ಷೇತ್ರದ ಶಾಲಿನಿ ಆಟದ ಮೈದಾನದಲ್ಲಿ ಇಂದು ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿಯವರು ಆಯೋಜಿಸಿದ್ದ ಕೊರೊನಾ ವಾರಿಯರ್ಸ್, ಪೌರ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

- Advertisement -


ದೇಶದ ಜನತೆ ಕೇಂದ್ರದಲ್ಲಿ ಬಿಜೆಪಿಗೆ ಎರಡನೇ ಬಾರಿಗೆ ಅಧಿಕಾರ ನೀಡಿದರು. ಆದರೆ, ಪ್ರಧಾನಿ ನರೇಂದ್ರ ಮೋದಿಯವರಾಗಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಾಗಲಿ ಸಂಕಷ್ಟದ ಕಾಲದಲ್ಲಿ ಬಡವರ ನೆರವಿಗೆ ನಿಲ್ಲಲಿಲ್ಲ ಎಂದು ಟೀಕಿಸಿದರು.
ಬಿಪಿಎಲ್ ಕುಟುಂಬದಲ್ಲಿ ಕೋವಿಡ್ ನಿಂದ ಮೃತ ಪಟ್ಟ ಎಲ್ಲರಿಗೂ ತಲಾ ಒಂದು ಲಕ್ಷ ರೂ.ಗಳ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಐದು ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿದರು.
ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಿಪಿಎಲ್ ಕುಟುಂಬದವರಿಗೆ 10 ಕೆ.ಜಿ. ಅಕ್ಕಿ, 10 ಸಾವಿರ ರೂಪಾಯಿ ಕೊಡಿ ಎಂದರೆ ಕೇಳಲಿಲ್ಲ. ಸರ್ಕಾರ ಇರುವುದು ಬಡವರಿಗೆ ಸ್ಪಂದಿಸಲು. ರಾಜ್ಯ ಸರ್ಕಾರದ ಬಜೆಟ್ 2.42 ಲಕ್ಷ ಕೋಟಿ. ಅದರಲ್ಲಿ 15-20 ಸಾವಿರ ಕೋಟಿಯನ್ನ ಬಡವರಿಗೆ ನೀಡಿದ್ದರೆ ಏನೂ ನಷ್ಟವಾಗುತ್ತಿರಲಿಲ್ಲ.


ಪ್ಯಾಕೇಜ್ ನಲ್ಲಿ ಕೆಲವರಿಗೆ ಪುಡಿಗಾಸು ಘೋಷಣೆ ಮಾಡಿದ್ದಾರೆ. ಅದು ಯಾರಿಗೆ ಸಿಗುವುದೋ ಯಾರಿಗೆ ಸಿಗುವುದಿಲ್ಲವೋ ಗೊತ್ತಿಲ್ಲ. ಈ ಹಿಂದೆ ಘೋಷಿಸಿದ ಪ್ಯಾಕೇಜ್ ನಿಂದಲೂ ಯಾರಿಗೂ ಅನುಕೂಲ ಆಗಲಿಲ್ಲ. ಕೊರೊನಾದಿಂದ ಮೃತರಾದರೆ ಕುಟುಂಬದಲ್ಲಿ ಒಬ್ಬರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಒಬ್ಬರಿಗೆ ಮಾತ್ರ ಹಣ ಪಡೆಯುವುರೇ ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕೋವಿಡ್ ನಿಂದ 32 ಸಾವಿರ ಜನ ಸತ್ತಿದ್ದಾರೆ. ಅದರಲ್ಲಿ ಬಿಪಿಎಲ್ ಕಾರ್ಡ್ ನವರು 25 ಸಾವಿರ ಮಂದಿ ಇರಬಹುದು, ಎಲ್ಲರಿಗೂ ಪರಿಹಾರ ನೀಡಲು ಒಂದೂವರೆ ಸಾವಿರ ಕೋಟಿ ವೆಚ್ಚವಾಗಬಹುದು. ಅಷ್ಟು ಮಂದಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೊರೊನಾ ಒಂದನೇ ಅಲೆಯಿಂದ ಎರಡನೇ ಅಲೆಯ ನಡುವೆ ಸಾಕಷ್ಟು ಸಮಯ ಇತ್ತು. ಆ ವೇಳೆ ಲಸಿಕೆ ತಯಾರಿಸಿ ಎಲ್ಲರಿಗೂ ಕೊಡಬಹುದಿತ್ತು, ಕೇಂದ್ರ ಸರ್ಕಾರ ಆ ಕೆಲಸ ಮಾಡಲಿಲ್ಲ. ಲಸಿಕೆಯನ್ನು ಇಲ್ಲಿಯೇ ತಯಾರಿಸಲಿ ಅಥವಾ ಬೇರೆ ಕಡೆಯಿಂದ ತರಿಸಿಕೊಳ್ಳಲಿ. ಆದರೆ, ಎಲ್ಲರಿಗೂ ಲಸಿಕೆ ಸಿಗುವಂತಾಗಲಿ.
ಸೆಪ್ಟಂಬರ್-ಅಕ್ಟೋಬರ್ ನಲ್ಲಿ ಮೂರನೇ ಅಲೆ ಬರುವ ನಿರೀಕ್ಷೆ ಇದೆ. ಅಷ್ಟರಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡಬೇಕು. ಜನರ ಪ್ರಾಣ ಉಳಿಸುವುದು ಮುಖ್ಯ ಲಸಿಕೆ ಹಾಕಿಸಿಕೊಂಡ ಶೇ.80ರಷ್ಟು ಜನರಿಗೆ ಕೊರೊನಾ ಬರುವುದಿಲ್ಲ. ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಶೇ.75ರಷ್ಟು ಉಚಿತವಾಗಿ, ಶೇ.25ರಷ್ಟು ಲಸಿಕೆಗಳನ್ನು ಖಾಸಗಿಯಾಗಿ ಮಾರಾಟಕ್ಕಿಟ್ಟಿದೆ. ಅದನ್ನು ಕೈ ಬಿಟ್ಟು ಎಲ್ಲರಿಗೂ ಉಚಿತ ಲಸಿಕೆ ಕೊಡಬೇಕು ಎಂದರು.

- Advertisement -


ನಮ್ಮ ಪಕ್ಷದ ಸರ್ಕಾರ ಇದ್ದಿದ್ದರೆ ಬಡವರಿಗೆ 10 ಕೆ.ಜಿ.ಅಕ್ಕಿ ಮತ್ತು 10 ಸಾವಿರ ರೂಪಾಯಿಯನ್ನು ಕೊಡುತ್ತಿದ್ದೆವು. ಬಡವರಿಗೆ ನೆರವು ನೀಡಿದರೆ ಇವರ ಮನೆಯ ಗಂಟು ಹೋಗುತ್ತದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಇಂದಿರಾಗಾಂಧಿ ಅವರ ಫೋಟೋ ಇದೆ ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟಿನ್ ನಿಲ್ಲಿಸಿದರು. ಇತ್ತೀಚೆಗೆ ಅದನ್ನು ಪುನಃ ಆರಂಭಿಸಿದರೂ ಬಾಕಿ ಬಿಲ್ ಪಾವತಿಸಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಮಾತ್ರ ಬಡವರ ಪರವಾಗಿ ನಿಲ್ಲಲಿದೆ. ಸಂವಿಧಾನ ಹೇಳುವಂತೆ ಸರ್ವರಿಗೂ ಸಮಪಾಲು, ಸಮಬಾಳು ಸಿದ್ಧಾಂತವನ್ನು ಸರ್ಕಾರಗಳು ಪಾಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅಚ್ಚೆ ದಿನ್ ಆಯೇಗಾ ಎನ್ನುತ್ತಿದ್ದರು. ಯುವಕರು ಮೋದಿ ಮೋದಿ ಎನ್ನುತ್ತಿದ್ದರು.
ಪೆಟ್ರೋಲ್, ಡೀಸೆಲ್ 100 ರೂಪಾಯಿ ದಾಟಿದೆ. ನಾವು ಪ್ರತಿಭಟನೆ ಮಾಡಿದ ಮೇಲೂ ದರ ಹೆಚ್ಚಳವಾಗುತ್ತಿದೆ. ಮೂಲ ಬೆಲೆಗಿಂತಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆಯೇ ಹೆಚ್ಚಾಗಿದೆ. ಪ್ರಧಾನಿಯವರು ತಿಗಣೆ ರೀತಿಯಲ್ಲಿ ಜನರ ರಕ್ತ ಹೀರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪೆಟ್ರೋಲ್, ಡೀಸೆಲ್ ಮೇಲೆ ಜಿಎಸ್ ಟಿ ಹಾಕಿ ಎಂದು ಕಾಂಗ್ರೆಸ್ ಹೇಳಿಲ್ಲ, ತೆರಿಗೆ ಕಡಿಮೆ ಮಾಡಿ ಎಂದು ಒತ್ತಾಯಿಸಿದ್ದೇವೆ. ಇಂಧನದ ಬೆಲೆ ಕಡಿಮೆಯಾದರೆ ಸಾಗಾಣೆ ದರ ಕಡಿಮೆಯಾಗಿ ಅಗತ್ಯ ವಸ್ತುಗಳ ಬೆಲೆ ಕೂಡ ಇಳಿಯಲಿದೆ ಎಂದು ಅಭಿಪ್ರಾಯ ಪಟ್ಟರು.
ಸರ್ಕಾರದ ನೆರವು ನಂಬಿ ಕೂತಿದ್ದರೆ ಬಡವರು ಇನ್ನೂ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ನಮ್ಮ ಪಕ್ಷದ ಶಾಸಕರು, ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಸಂಸದರು, ಮುಖಂಡರು ಸಂಕಷ್ಟದ ಸಮಯದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜನರ ನೆರವಿಗೆ ನಿಂತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್, ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಮತ್ತಿತರರು ಹಾಜರಿದ್ದರು.

Join Whatsapp