ನವದೆಹಲಿ: ಅಕ್ರಮ ಹಣ ವರ್ಗಾವಣೆ ಎಂದು ದಿಲ್ಲಿಯ ಮಾಜೀ ಮಂತ್ರಿ ಸತ್ಯೇಂದರ್ ಜೈನ್ ಮೇಲೆ ಹಾಕಿರುವ ಮೊಕದ್ದಮೆಯನ್ನು ಬೇರೆ ನ್ಯಾಯಾಧೀಶರಲ್ಲಿಗೆ ವರ್ಗಾಯಿಸಬೇಕು ಎಂದು ಇಡಿ- ಜಾರಿ ನಿರ್ದೇಶನಾಲಯ ಕೋರಿರುವುದನ್ನು ಪ್ರಶ್ನಿಸಿರುವ ಅರ್ಜಿಯ ಸಂಬಂಧ ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ಸೆಪ್ಟೆಂಬರ್ 26ರಂದು ಜಾರಿ ನಿರ್ದೇಶನಾಲಯಕ್ಕೆ ನೋಟೀಸು ನೀಡಿತು.
ಜಸ್ಟಿಸ್ ಯೋಗೇಶ್ ಖನ್ನಾ ಅವರು ಕೂಡಲೆ ಉತ್ತರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ನೋಟೀಸು ನೀಡಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಇಟ್ಟರು.
ವಿಶೇಷ ಕೋರ್ಟಿನಲ್ಲಿ ಜಸ್ಟಿಸ್ ಗೀತಾಂಜಲಿ ಗೋಯೆಲ್ ರಲ್ಲಿ ಸತ್ಯೇಂದರ್ ಜೈನ್ ರ ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಈ ನಡುವೆ ಗೋಯೆಲ್ ರ ಪ್ರಶ್ನೆಗೆ ಉತ್ತರಿಸಲಾಗದ ಜಾರಿ ನಿರ್ದೇಶನಾಲಯದವರು ಈ ಪ್ರಕರಣವನ್ನು ವಿಶೇಷ ಕೋರ್ಟಿನ ಜಸ್ಟಿಸ್ ವಿಕಾಸ್ ಧುಲ್ ರಿಗೆ ವರ್ಗಾಯಿಸುವಂತೆ ಕೇಳಿತ್ತು.
ಈ ಹೊಸ ಬೆಳವಣಿಗೆಯನ್ನು ಸತ್ಯೇಂದರ್ ಜೈನ್ ಹೈ ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟು ಜೈನ್ ರ ಜಾಮೀನು ಅರ್ಜಿಯನ್ನು 14 ದಿನದೊಳಗೆ ನಿರ್ಣಯಿಸುವಂತೆ ಸುಪ್ರೀಂ ಕೋರ್ಟು ಹೇಳಿದೆ. ಇಡಿ ಸಾಕು ಪೋಕು ಎಳೆಯುತ್ತಿದೆ ಎಂದು ಜೈನ್ ರ ವಕೀಲರಾದ ಎನ್. ಹರಿಹರನ್ ವಾದಿಸಿದರು. ಈ ವಾದವು ತಪ್ಪು ಅಭಿಪ್ರಾಯಕ್ಕೆ ದಾರಿ ಮಾಡುತ್ತದೆ ಎಂದೂ ಅವರು ಹೇಳಿದರು.
ಸೆಪ್ಟೆಂಬರ್ 19ರಂದು ಜಿಲ್ಲಾ ಮತ್ತು ಸೆಶನ್ಸ್ ಜಡ್ಜ್ ವಿನಯಕುಮಾರ್ ಗುಪ್ತ ಅವರು ಜಸ್ಟಿಸ್ ಗೀತಾಂಜಲಿ ಗೋಯೆಲ್ ವಿಚಾರಣೆಯಲ್ಲಿರುವ ಜೈನ್ ರ ಜಾಮೀನು ಅರ್ಜಿ ವಿಚಾರಣೆಗೆ ತಡೆ ನೀಡಿ ಜೈನ್ ಮತ್ತು ಸಹ ಆರೋಪಿಗಳಿಗೆ ನೋಟೀಸು ನೀಡಿದ್ದರು.
ಮೇ 30ರಂದು ಪಿಎಂಎಲ್ಎ ಅಡಿ ಜೈನ್ ರ ಬಂಧನ ಆದಾಗಿನಿಂದ ಅವರ ಜಾಮೀನು ಅರ್ಜಿಯನ್ನು ಹಲವು ವಿಚಾರಣೆಗಳಲ್ಲಿ ಮುಂದೂಡಲಾಗಿದೆ. ಹಾಗಾಗಿ ಅವರು ತಿಹಾರ್ ಜೈಲಿನಲ್ಲಿಯೇ ಇದ್ದಾರೆ.
ಬೇನಾಮಿ ಕಂಪೆನಿ ಮೂಲಕ ಸತ್ಯೇಂದರ್ ಜೈನ್ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯದವರು ಆರೋಪಿಸಿದ್ದರು. ಅಂಕುಶ್ ಜೈನ್ ಮತ್ತು ವೈಭವ್ ಜೈನ್ ಸಹ ಆರೋಪಿಗಳಾಗಿದ್ದಾರೆ.