ಭ್ರಷ್ಟಾಚಾರ ನಿರ್ಮೂಲನ ಅಭಿಯಾನ ಹಮ್ಮಿಕೊಳ್ಳುವ ಮೂಲಕ ನೇಮಕಾತಿ ಅಕ್ರಮಗಳನ್ನು ಒಪ್ಪಿಕೊಂಡಂತಾಗಿದೆ: ರಾಮಲಿಂಗಾರೆಡ್ಡಿ ಆರೋಪ

Prasthutha|

ಬೆಂಗಳೂರು: ಸಿಟಿಜನ್ ಎನ್ ಕ್ವೈರಿ ಕೌನ್ಸಿಲ್ ಅವರು ಭ್ರಷ್ಟಾಚಾರ ನಿರ್ಮೂಲನ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ನೇಮಕಾತಿಯಲ್ಲಿನ ಅಕ್ರಮಗಳನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

- Advertisement -

ಈ ಕುರಿತು ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 23-09-2022ರಂದು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅವರು ಒಂದು ಟಿಪ್ಪಣಿ ಕಳುಹಿಸಿದ್ದು,ಅದರಲ್ಲಿ ಸಿಟಿಜನ್ ಎನ್ ಕ್ವೈರಿ ಕೌನ್ಸಿಲ್ ಅವರು ಭ್ರಷ್ಟಾಚಾರ ನಿರ್ಮೂಲನ ಅಭಿಯಾನ ಹಮ್ಮಿಕೊಂಡಿದ್ದು. ಸದರಿ ಸಂಸ್ಥೆ ಸಿದ್ದಪಡಿಸಿರುವ ‘ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ’ ಎಂಬ ಶೀರ್ಷಿಕೆ ನಾಮಫಲಕವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕುವಂತೆ ಸುತ್ತೋಲೆ ಹೊರಡಿಸುವಂತೆ ಮನವಿ ಮಾಡಿರುತ್ತಾರೆ. ಈ ಉದ್ದೇಶ ಸರಿಯಾಗಿರಬಹುದು. ಆದರೆ ಸಿಎಂ ಕಚೇರಿಯಲ್ಲಿ ಈ ಸಿಟಿಜನ್ ಎನ್ಕ್ವೈರಿ ಸಂಸ್ಥೆ ನೀಡಿರುವ ಶಿಫಾರಸ್ಸನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ. ಆ ಮೂಲಕ 40% ಕಮಿಷನ್, ವಿವಿಧ ಇಲಾಖೆಗಳ ನೇಮಕಾತಿ ಅಕ್ರಮಗಳನ್ನು ಒಪ್ಪಿಕೊಂಡಂತಾಗಿದೆ. ನಮ್ಮ ರಾಜ್ಯದಲ್ಲಿ 2.58 ಲಕ್ಷ ಹುದ್ದೆಗಳು ಖಾಲಿ ಇದ್ದು, ಈಗಾಗಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ತಾಂಡವವಾಡುತ್ತಿದೆ. ಪಿಎಸ್ಐ ಅಕ್ರಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಬಂಧನವಾಗಿದೆ. ಬೇರೆ ಇಲಾಖೆಯಲ್ಲೂ ಲಂಚ ತಾಂಡವವಾಡುತ್ತಿದೆ ಎಂಬುದು ಈ ಟಿಪ್ಪಣಿಯಿಂದ ಸಾಬೀತಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರ ನಿಗ್ರಹಿಸುವ ಆಸಕ್ತಿ ಇದ್ದಿದ್ದರೆ ವಿರೋಧ ಪಕ್ಷಗಳು ಮಾಡುತ್ತಿರುವ ನೇಮಕಾತಿ ಅಕ್ರಮದ ಪ್ರಕರಣ ನ್ಯಾಯಾಂಗ ತನಿಖೆ ಮಾಡಿಸಬಹುದಿತ್ತು. ಆದರೆ ಇದನ್ನು ಮಾಡಲು ಅವರಿಗೆ ಇಚ್ಛೆ ಇಲ್ಲ. ಈಗ ಕೇವಲ ಅಧಿಕಾರಿಗಳ ಬಂಧನವಾಗಿದ್ದು, ನ್ಯಾಯಾಂಗ ತನಿಖೆ ಮಾಡಿದರೆ ಸರ್ಕಾರದವರ ಹೆಸರು ಬರುತ್ತದೆ ಎಂದು ಮಾಡುತ್ತಿಲ್ಲ. ಈಗ ಪೇ ಸಿಎಂ ಅಭಿಯಾನದ ಸಂಚಲನದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಅಭಿಯಾನವನ್ನು ತಾತ್ಕಾಲಿಕವಾಗಿ ಮಾಡುತ್ತಿದ್ದಾರೆ. ಇದು ತೋರಿಕೆಯ ಅಭಿಯಾನವಾಗಿದೆ ಎಂದು ಕಿಡಿಕಾರಿದ್ದಾರೆ.

- Advertisement -

ಈ ಪ್ರಕರಣ ತನಿಖೆಯನ್ನು ಲೋಕಾಯುಕ್ತಕ್ಕೂ ನೀಡುತ್ತಿಲ್ಲ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಾಗ ನ್ಯಾಯಾಂಗ ತನಿಖೆ ನೀಡಿ ನ್ಯಾಯ ಒದಗಿಸಬಹುದಿತ್ತು. ಆದರೆ ತಮ್ಮ ವ್ಯಾಪ್ತಿ ಸಂಸ್ಥೆಗಳಿಂದ ತನಿಖೆ ಮಾಡಿಸಿ ಕ್ಲೀನ್ ಚಿಟ್ ನೀಡಿದರೆ ಭ್ರಷಟಾಚಾರ ಎಲ್ಲಿ ನಿಯಂತ್ರಣವಾಗುತ್ತದೆ? ನಿನ್ನೆ ಮಾಧ್ಯಮದಲ್ಲಿ ಕಮಿಷನ್ ಇಲ್ಲದೆ ಕಾರ್ಮಿಕ ಇಲಾಖೆಯಲ್ಲಿ ಫೈಲ್ ಮುಂದಕ್ಕೆ ಹೋಗುವುದಿಲ್ಲ ಎಂಬ ವರದಿ ಬಂದಿದೆ. ಆರೋಗ್ಯ ಲಾಖೆಯಲ್ಲಿ ಅಕ್ರಮದ ಬಗ್ಗೆ ವರದಿ ಬಂದಿದೆ. ಮಠಾಧೀಶರು ಅನುದಾನದಲ್ಲಿ ಕಮಿಷನ್ ಕೇಳುವ ಆರೋಪ ಮಾಡಿದ್ದಾರೆ ಎಂದು ಗುಡುಗಿದರು.

ಭ್ರಷ್ಟಾಚಾರದಲ್ಲಿ ಭಾರತಕ್ಕೆ ಕರ್ನಾಟಕ ರಾಜ್ಯವನ್ನು ರಾಜಧಾನಿಯನ್ನಾಗಿ ಮಾಡಿರುವುದು ಬಿಜೆಪಿ ಸಾಧನೆ. ಭ್ರಷ್ಟಾಚಾರ ನಿಗ್ರಹ ಮಾಡುವ ಆಸಕ್ತಿ ಇದ್ದರೆ 2006ರಿಂದ ಇಲ್ಲಿಯವರೆಗೂ ಎಲ್ಲ ಪ್ರಕರಣ ನ್ಯಾಯಾಂಗ ತನಿಖೆ ಮಾಡಿಸಿ. ಅಧಿಕಾರಿಗಳು ಮಾತ್ರ ತಮ್ಮ ಟೇಬಲ್ ಮೇಲೆ ಈ ನಾಮಫಲಕ ಹಾಕುವ ಬದಲು, ಎಲ್ಲ ಮಂತ್ರಿಗಳು, ಶಾಸಕರು ತಮ್ಮ ಕಚೇರಿಯಲ್ಲಿ ಹಾಕಲಿ ಎಂದು ಕೆಪಿಸಿಸಿ ವತಿಯಿಂದ ನಾಮಫಲಕ ಕಳುಹಿಸಲಾಗುತ್ತಿದೆ. ಎಲ್ಲ ಹಂತದಲ್ಲೂ ಭ್ರಷ್ಟಾಚಾರ ನಡೆಯುವುದರಿಂದ ಎಲ್ಲರೂ ಇದರಲ್ಲಿ ಸಹಕಾರ ನೀಡಬೇಕು. ಈ ಪ್ರಯತ್ನದಲ್ಲಿ ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿಗಳು ನೀಚ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. 2018ರ ಮಾರ್ಚ್ ತಿಂಗಳಲ್ಲಿ ಪ್ರಧಾನ ಮಂತ್ರಿಗಲು ಅರಮನೆ ಮೈದಾನಕ್ಕೆ ಬಂದಾಗ, ಚುನಾವಣೆ ಭಾಷಣದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 10 % ಸರ್ಕಾರ, ಸೀದಾರುಪಯ್ಯ ಸರ್ಕಾರ ಎಂದರು. ಅಂದು ಸಿದ್ದರಾಮಯ್ಯ ಅವರ ವಿರುದ್ಧವಾಗಲಿ, ಸಚಿವರ ವಿರುದ್ಧವಾಗಲಿ ಆರೋಪ ಇತ್ತೇ? ಇರಲಿಲ್ಲ. 40% ಸರ್ಕಾರ ಎಂಬುದು ನೀಚ ರಾಜಕಾರಣವಾದರೆ, ಈ ನೀಚ ರಾಜಕಾರಣ ಆರಂಭಿಸಿದ್ದು ಯಾರು? ಆಗ ಮೋದಿ ಅವರ ಮಾತಿಗೆ ಚಪ್ಪಾಳೆ ತಟ್ಟಿದಿರಿ, ಆಗ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡಿದಾಗ ರಾಜ್ಯಕ್ಕೆ ಅಪಮಾನ ಆಗಲಿಲ್ಲವೇ? ಈಗ ನಿಮ್ಮ ವಿರುದ್ಧ ಮಾತನಾಡಿದರೆ ರಾಜ್ಯಕ್ಕೆ ಅಪಮಾನವೇ? ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಮಾತನಾಡಿ, ಇದೇ 23ರಂದು ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸುತ್ತೋಲೆ ಹೊರಡಿಸಿದ್ದು, ನಾಮಫಲಕ ಅಬಿಯಾನ ನಡೆಸಲು ತಿಳಿಸಿದೆ. ಆ ನಾಮ ಫಲಕದಲ್ಲಿ ‘ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ’ ಎಂದು ತಿಳಿಸಿದೆ. ಇದನ್ನು ಸರ್ಕಾರಿ ಕಚೇರಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಾಕಬೇಕು ಎಂದು ಹೇಳಿರುವುದು ದುರಂತ ತಿಳಿಸಿದರು.

ಕಾಡುಗಳನ್ನು ಉಳಿಸಿ ಎಂಬ ಅಭಿಯಾನ ಮಾಡಿದರೆ ಕಾಡುಗಳಿಗೆ ತೊಂದರೆ ಆಗುತ್ತಿದೆ ಎಂದರ್ಥ. ಮಾಯು ಮಾಲಿನ್ಯ ತಡೆಗಟ್ಟಿ ಅಬಿಯಾನ ಮಾಡಿದರೆ ಮಾಲಿನ್ಯ ಹೆಚ್ಚಾಗುತ್ತಿದೆ ಎಂದರ್ಥ. ಆದರೆ ಎನ್ಜಿಒ ಮಾಡುತ್ತಿರುವ ಭ್ರಷ್ಟಾಚಾರ ವಿರುದ್ಧ ಅಭಿಯಾನ ಅಂಗೀಕರಿಸಿ ಸಿಎಂ ಕಚೇರಿಯಿಂದ ಅಭಿಯಾನಕ್ಕೆ ಬೆಂಬಲ ಇದೆ ಎಂದರೆ ಈ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದರ್ಥ. ಬಜೆಟ್ ನಲ್ಲಿ ಸಿಎಂ ಅವರು ಸರ್ವಸ್ಪರ್ಶಿ, ಸರ್ವವ್ಯಾಪಿ ಎಂದು ಹೇಳಿದ್ದರು. ಈ ಅಭಿಯಾನದ ಮೂಲಕ ಈ ಸರ್ಕಾರದಲ್ಲಿ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಎಂದರೆ ಅದು ಭ್ರಷ್ಟಾಚಾರ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಅಭಿಯಾನವನ್ನು ನಿಗದಿತ ಕಾಲಾವಧಿಯಲ್ಲಿ ನಡೆಸಲು ತಿಳಿಸಿದ್ದಾರೆ. ಹಾಗಾದರೆ ಈ ಅಭಿಯಾನದ ಮುನ್ನ ಹಾಗೂ ಅಭಿಯಾನದ ನಂತರ ಭ್ರಷ್ಟಾಚಾರ ಮಾಡಬಹುದೇ? ಸರ್ಕಾರಕ್ಕೆ ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಇಚ್ಛಾಶಕ್ತಿ ಇದ್ದರೆ ಅವರು ನಾವು ಮಾಡುತ್ತಿರುವ ಅಕ್ರಮ ಹಾಗೂ ಹಗರಣಗಳ ಆರೋಪಗಳ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ನೀಡುತ್ತಿತ್ತು. ಆದರೆ ಇಂತಹ ಸುತ್ತೋಲೆಗಳ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಸುತ್ತೋಲೆಯಲ್ಲಿ ಈ ನಾಮಫಲಕವನ್ನು ಸ್ವಯಂ ಪ್ರೇರಿತವಾಗಿ ಹಾಕಿಕೊಳ್ಳಬಹುದು ಎಂದು ಹೇಳಿದ್ದಾರೆ. ನಿಮ್ಮ ಆದೇಶದ ಪ್ರಕಾರ ಈ ನಾಮಫಲಕ ಯಾರು ಹಾಕಿಕೊಳ್ಳುತ್ತಾರೋ ಅವರು ಪ್ರಮಾಣಿಕರು, ಯಾರು ಹಾಕಿಕೊಳ್ಳುವುದಿಲ್ಲವೋ ಅವರು ಭ್ರಷ್ಟರು ಎಂದು ಭಾವಿಸಬೇಕೆ ಎಂದು ಖರ್ಗೆ ಪ್ರಶ್ನಿಸಿದರು.

ಪೇ ಸಿಎಂ ಅಭಿಯಾನ ಮಾಡಿದಾಗ ಮುಖ್ಯಮಂತ್ರಿಗಳು ಕಾಂಗ್ರೆಸ್ ವಿರುದ್ಧ ನೀಚರಾಜಕಾರಣದ ಆರೋಪ ಮಾಡುತ್ತಾರೆ. ಅವರ ಪ್ರಕಾರ 40% ಕಮಿಷನ್ ಪಡೆಯುವುದು ನೀಚ ರಾಜಕಾರಣವಲ್ಲ. ಇವರು ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಹೇಳುವುದು ನೀಚ ರಾಜಕಾರಣವೇ? ರಾಜ್ಯದಲ್ಲಿ ಭ್ರಷ್ಟಾಚಾರ ಇದೆ ಎಂದು ಒಪ್ಪಿಕೊಂಡಾಗ, ನಮ್ಮ ರಾಜ್ಯದ ಘನತೆಗೆ ಧಕ್ಕೆ ಬರುವುದಿಲ್ಲವೇ? ತೆಲಂಗಾಣದಲ್ಲಿ ನಿಮಗೆ 40% ಸಿಎಂ ಎಂದು ಫಲಕ ಹಾಕಿದಾಗ ರಾಜ್ಯದ ಘನತೆಗೆ ಧಕ್ಕೆ ಆಗಲಿಲ್ಲವೇ? ಪೇ ಸಿಎಂ ಅಭಿಯಾನ ನೋಡಿದ ತಕ್ಷಣ ನೀವು ನೀಚರಾಜಕಾರಣ ಎನ್ನುತ್ತೀರಿ ಎಂದು ಕುಟುಕಿದರು.

ಈ ಕ್ಯೂಆರ್ ಕೋಡ್ ನಲ್ಲಿ ನಿಮ್ಮ ಸರ್ಕಾರದ ಭ್ರಷ್ಟಾಚಾರದ ರೇಟ್ ಕಾರ್ಡ್ ಇದೆ. ಈ ರೇಟ್ ಕಾರ್ಡ್ ನಾವು ಸಿದ್ಧಪಡಿಸಿರುವುದಲ್ಲ, ಗುತ್ತಿಗೆ ದಾರರ ಸಂಘದವರು, ಮಠಾಧೀಶರು ಹಾಗೂ ಮಾಧ್ಯಮಗಳ ವರದಿ ಆಧರಿಸಿ ಮುಖ್ಯಮಂತ್ರಿ ಹುದ್ದೆಯಿಂದ ಪೊಲೀಸ್ ಕಾನ್ ಸ್ಟೇಬಲ್ ತನಕ ನಿಗದಿಯಾಗಿರುವ ರೇಟ್ ಹಾಕಲಾಗಿದೆ. ಈ ಬಗ್ಗೆ ನಿಮ್ಮ ಶಾಸಕರು ನೀಡಿರುವ ಮಾಹಿತಿಯನ್ನೇ ಹಾಕಲಾಗಿದೆ ಎಂದರು.

ಈ ವ್ಯವಸ್ಥೆ ಯಾವ ಹಂತಕ್ಕೆ ಬಂದಿದೆ ಎಂದರೆ ಶಾಸಕರ ಭವನದಲ್ಲಿ ಪಿಎಸ್ ಐ ಅಕ್ರಮದ ಡೀಲ್ ನಡೆದಿದೆ. ಹೀಗಾಗಿ ಸರ್ಕಾರ ಭ್ರಷ್ಟಾಚಾರ ವಿರುದ್ಧದ ಅಭಿಯಾನವನ್ನು ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿ ಇಡದೇ ವಿಧಾನಸೌಧದಲ್ಲಿ ನಿಮ್ಮ ಸಚಿವರ ಕಚೇರಿಗಳಲ್ಲೂ ಈ ಅಭಿಯಾನ ಮಾಡಿ. ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ ನಾನು ಭ್ರಷ್ಟ ಸಚಿವನಾಗಲಾರೆ ಎಂಬ ನಾಮಫಲಕ ಹಾಕಿ. ಈ ನಾಮಫಲಕದಲ್ಲೂ ನೀವು 40% ಕಮಿಷನ್ ಪಡೆಯುತ್ತೀರಿ. ಹೀಗಾಗಿ ಈ ನಾಮಫಲಕವನ್ನು ನಾವು ನೀಡುತ್ತೇವೆ ಎಂದು ಮುಖ್ಯಮಂತ್ರಿಯನ್ನು ಛೇಡಿಸಿದ್ದಾರೆ.

ಸರ್ಕಾರ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು, ತಾವು ನಿಜವಾಗಿಯೂ ಪ್ರಾಮಾಣಿಕರಿದ್ದರೆ, ಈಗ ಕೇಳಿ ಬಂದಿರುವ ಭ್ರಷ್ಟಾಚಾರ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ನೀಡಿ. ಆಗ ನಿಮ್ಮಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೀರಿ ಎಂಬ ನಂಬಿಕೆ ಬರುತ್ತದೆ. ಮಾತೆತ್ತಿದರೆ ಕಾಂಗ್ರೆಸ್ ನವರ ಹೆಸರು ಬರುತ್ತದೆ ಎಂದು ಹೇಳುತ್ತೀರಿ. ನಮ್ಮ ವಿರೋಧ ಪಕ್ಷದ ನಾಯಕರು ಹಾಗೂ ಪಕ್ಷದ ಅದ್ಯಕ್ಷರು ಕಾಂಗ್ರೆಸ್ ಸರ್ಕಾರದ ಅವಧಿಯ ಪ್ರಕರಣಗಳನ್ನು ತನಿಖೆ ಮಾಡುವಂತೆ ಆಗ್ರಹಿಸಿದ್ದಾರೆ. ಆದರೂ ನ್ಯಾಯಾಂಗ ತನಿಖೆ ನೀಡಲು ನೀವು ಹಿಂಜರಿಯುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

Join Whatsapp