ದೆಹಲಿ : ಕೋವಿಡ್-19 ರ ಮೂರನೇ ಅಲೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಆರೋಗ್ಯ ಸಹಾಯಕರಾಗಿ 5,000 ಯುವಕರಿಗೆ ತರಬೇತಿ ನೀಡುವುದಾಗಿ ದೆಹಲಿ ಸರ್ಕಾರ ಬುಧವಾರ ಘೋಷಿಸಿದೆ.
“ಎರಡನೇ ಅಲೆಯ ಸಮಯದಲ್ಲಿ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಯ ಕೊರತೆಯ ಹಿನ್ನೆಲೆಯಲ್ಲಿ, 5,000 ಆರೋಗ್ಯ ಸಹಾಯಕರು ಅಥವಾ ಸಮುದಾಯ ನರ್ಸಿಂಗ್ ಸಹಾಯಕರನ್ನು ಸಿದ್ಧಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸರ್ಕಾರ ಹೊಂದಿದೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದೆಹಲಿಯ ಇಂದ್ರಪ್ರಸ್ಥ ವಿಶ್ವವಿದ್ಯಾಲಯದಿಂದ ತಲಾ 2 ವಾರಗಳ ಕಾಲ 5000 ಯುವಕರಿಗೆ ತರಬೇತಿ ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.
“ಅಭ್ಯರ್ಥಿಗಳಿಗೆ ದೆಹಲಿಯ ಒಂಬತ್ತು ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಮೂಲಭೂತ ತರಬೇತಿ ನೀಡಲಾಗುವುದು ಮತ್ತು ವೈದ್ಯರು ಮತ್ತು ದಾದಿಯರ ಸಹಾಯಕರಾಗಿ ಕೆಲಸ ನೀಡಲಾಗುವುದು. ನರ್ಸಿಂಗ್, ಅರೆವೈದ್ಯಕೀಯ ಸಿಬ್ಬಂದಿ, ಜೀವ ಉಳಿಸುವಿಕೆ, ಪ್ರಥಮ ಚಿಕಿತ್ಸೆ ಮತ್ತು ಮನೆ ಆರೈಕೆಯಲ್ಲಿ ಮೂಲಭೂತ ತರಬೇತಿಯನ್ನು ಈ ಸಂಧರ್ಭದಲ್ಲಿ ನೀಡಲಾಗುವುದು” ಎಂದು ಅವರು ಹೇಳಿದರು.
“ಜೂನ್ 17 ರಿಂದ ಆನ್ ಲೈನ್ ಅರ್ಜಿಗಳನ್ನು ಭರ್ತಿ ಮಾಡಬಹುದು ಮತ್ತು ಜೂನ್ 21 ರಿಂದ ತರಬೇತಿ ಪ್ರಾರಂಭವಾಗಲಿದೆ. 500 ಜನರ ತಂಡವೊಂದರಲ್ಲಿ ತರಬೇತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು 12ನೇ ತರಗತಿಯನ್ನು ತೇರ್ಗಡೆ ಹೊಂದಿರಬೇಕು ಮತ್ತು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.” ಎಂದು ಮಾಹಿತಿ ನೀಡಿದ್ದಾರೆ.