ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ 4 ರನ್​ಗಳ ಅಂತರದಿಂದ ಗೆಲುವು

Prasthutha|

ನವದೆಹಲಿ: ರಿಷಭ್ ಪಂತ್ ಮತ್ತು ಅಕ್ಷರ್ ಪಟೇಲ್​ ಮನಮೋಹಕ ಆಟದ ಸಹಾಯದಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ 4 ರನ್​ಗಳ ಅಂತರದಿಂದ ಗೆಲುವು ಸಾಧಿಸಿದೆ.

- Advertisement -

ಜಿಟಿ ಪರ ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ ಬಿರುಸಿನ ಬ್ಯಾಟಿಂಗ್ ಮೂಲಕ ಹೋರಾಟ ನಡೆಸಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಭರ್ಜರಿ ಪ್ರದರ್ಶನ ತೋರಿತ್ತು. ರಿಷಭ್ ಪಂತ್ ಮತ್ತು ಅಕ್ಷರ್‌ ಪಟೇಲ್ ಬಿರುಸಿನ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ದಾಖಲಿಸಿದ್ದರು. ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್‌ ಗಳಿಸಿತು.

225 ರನ್​ಗಳ ಗುರಿ ಬೆನ್ನಟ್ಟಿದ ಗುಜರಾತ್, ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಶುಭ್ಮನ್ 6 ರನ್ ಗಳಿಸಿ ಆನ್ರಿಚ್ ನೋಕಿಯಾ ಬೌಲಿಂಗ್​ನಲ್ಲಿ ಔಟಾದರು. ಬಳಿಕ ಎರಡನೇ ವಿಕೆಟ್​ಗೆ 82 ರನ್ ಪಾಲುದಾರಿಕೆ ಹರಿದು ಬಂತು. ವೃದ್ದಿಮಾನ್ ಸಾಹ ಮತ್ತು ಸಾಯಿ ಸುದರ್ಶನ್ ಉತ್ತಮ ಪ್ರದರ್ಶನ ನೀಡಿದರು. ಸಾಹ 39 ರನ್ ಗಳಿಸಿದರೆ, ಸುದರ್ಶನ್ 39 ಎಸೆತಗಳಲ್ಲಿ 4 ಸಿಕ್ಸರ್​, 5 ಬೌಂಡರಿ ಸಹಿತ 65 ರನ್ ಗಳಿಸಿ ಡೆಲ್ಲಿ ಬೌಲರ್​​ಗಳ ಮೇಲೆ ಸವಾರಿ ಮಾಡಿದರು. ಆದರೆ, ಅಜ್ಮತುಲ್ಲಾ ಒಮರ್ಜಾಯ್ (1), ಶಾರೂಖ್ ಖಾನ್ (8), ರಾಹುಲ್ ತೆವಾಟಿಯಾ (4) ನಿರಾಸೆ ಮೂಡಿಸಿದರು.

- Advertisement -

ಸತತ ವಿಕೆಟ್​ಗಳ ನಡುವೆಯೂ ಹೋರಾಡಿದ ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ ಡೆಲ್ಲಿ ತಂಡಕ್ಕೆ ಸೋಲಿನ ಆತಂಕ ಸೃಷ್ಟಿಸಿದರು. ಮಿಲ್ಲರ್ 22 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 55 ಬಾರಿಸಿದರೆ, ರಶೀದ್ ಕೊನೆಯವರೆಗೂ ಕ್ರೀಸ್​ನಲ್ಲಿ ಉಳಿದು ಅದ್ಭುತ ಬ್ಯಾಟಿಂಗ್ ನಡೆಸಿದರು. ಅದರಲ್ಲೂ ಕೊನೆಯ ಓವರ್​​ನಲ್ಲಿ 19 ರನ್ ಬೇಕಿತ್ತು. ಆದರೆ ರಶೀದ್ 14 ರನ್ ಗಳಿಸಿದರು. ಇದರೊಂದಿಗೆ ರಶೀದ್ ಮತ್ತು ಮಿಲ್ಲರ್ ಹೋರಾಟ ವ್ಯರ್ಥವಾಯಿತು. ಡೆಲ್ಲಿ 4 ರನ್​ಗಳ ಅಂತರದಿಂದ ಗೆದ್ದು ಬೀಗಿತು. ರಸಿಕ್ ದಾರ್ ಸಲಾಮ್ 3, ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು.

ಮೂರನೇ ಸ್ಥಾನಕ್ಕೆ ಬಡ್ತಿ ಪಡೆದು ಬ್ಯಾಟಿಂಗ್​ನಲ್ಲಿ ಪರಾಕ್ರಮ ಮೆರೆದ ಅಕ್ಷರ್​, ಅಮೋಘ ಅರ್ಧಶತಕ ಬಾರಿಸಿದರು. 43 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 5 ಬೌಂಡರಿ ಸಹಿತ 66 ರನ್​ ಗಳಿಸಿದರು. ಅಕ್ಷರ್​ ಔಟಾದ ಬಳಿಕ ಸಿಡಿದೆದ್ದ ಪಂತ್ ಜಿಟಿ ಬೌಲರ್​ಗಳನ್ನು ಚೆಂಡಾಡಿದರು. ಅದರಲ್ಲೂ ಕೊನೆಯ ಓವರ್​​​ನಲ್ಲಿ 4 ಸಿಕ್ಸರ್ ಮತ್ತು 1 ಬೌಂಡರಿ ಸಹಿತ 31 ರನ್ ಚಚ್ಚಿದ್ದರು. ಅಂತಿಮವಾಗಿ 43 ಎಸೆತಗಳಲ್ಲಿ 8 ಸಿಕ್ಸರ್​, 5 ಬೌಂಡರಿ ಸಹಿತ ಅಜೇಯ 88 ರನ್ ಚಚ್ಚಿದರು.

Join Whatsapp