ನವದೆಹಲಿ: ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪಾಟ್ನಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ಬೆಂಕಿ ಕಾಣಿಸಿಕೊಂಡಿದ್ದು, ಆಕಾಶದಲ್ಲೇ ಹಲವು ನಿಮಿಷಗಳ ಕಾಲ ಸುತ್ತಾಡಿದ ಬಳಿಕ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಪೈಸ್’ಜೆಟ್ ವಿಮಾನವು ಮಧ್ಯಾಹ್ನ ಸುಮಾರು 12.10ಕ್ಕೆ ಟೇಕಾಫ್ ಆಗಿದ್ದು, ತಕ್ಷಣ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಿಂದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಪರ್ಯಾಯ ವಿಮಾನದ ಮೂಲಕ ಅವರ ದೆಹಲಿ ಪ್ರಯಾಣಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಬೆಂಕಿ ತಗುಲಲು ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಟೇಕ್ ಆಫ್ ಆದ ಕೂಡಲೇ ವಿಮಾನದೊಳಗೆ ನಡುಕ ಕಾಣಿಸಿಕೊಂಡಿದೆ ಮತ್ತು ವಿಮಾನದ ದೀಪಗಳು ಬಂದ್ ಆಗಲು ಆರಂಭಿಸಿದೆ ಎಂದು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ. ತಕ್ಷಣ ನಾವು ವಿಮಾನದ ಅಲರಾಮ್ ಅನ್ನು ಒತ್ತಿದೆವು. ಈ ವೇಳೆ ಸಿಬ್ಬಂದಿ ನಮ್ಮನ್ನು ಶಾಂತವಾಗಿರುವಂತೆ ಸೂಚಿಸಿದರು ಮತ್ತು ತುರ್ತು ಲ್ಯಾಂಡಿಂಗ್ ವ್ಯವಸ್ಥೆಗೊಳಿಸುತ್ತಿರುವ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.