ಹೊಸದಿಲ್ಲಿ: ದೆಹಲಿಯಲ್ಲಿ ತೀವ್ರ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ ದೆಹಲಿಗೆ ಹೊಂದಿಕೊಂಡಿರುವ ರಾಜ್ಯಗಳೊಂದಿಗೆ ಸಭೆ ನಡೆಸಿದೆ.
ವರ್ಚುವಲ್ ಪ್ಲಾಟ್ ಫಾರ್ಮ್‌ನಲ್ಲಿ ನಡೆದ ಸಭೆಯಲ್ಲಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಇತರ ಅಧಿಕಾರಿಗಳು ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು. ದೆಹಲಿಯ ವಾಯು ಮಾಲಿನ್ಯದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ಆಯೋಗ ತುರ್ತು ಸಭೆ ಕರೆದಿದೆ.
ದೆಹಲಿಯ ಹಲವು ಭಾಗಗಳಲ್ಲಿ ವಾಯು ಮಾಲಿನ್ಯದ ಮಟ್ಟವು ಅಪಾಯಕಾರಿಯಾಗಿದೆ. ವಾಯು ಮಾಲಿನ್ಯದ ಪ್ರಮಾಣ ಹೆಚ್ಚಿರುವ ಕುರಿತು ದೆಹಲಿ ಸರ್ಕಾರ ಮತ್ತು ಗಡಿ ರಾಜ್ಯಗಳನ್ನು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿತ್ತು.
ಲಾಕ್ ಡೌನ್ ನಂತಹ ಕ್ರಮಗಳನ್ನು ತೆಗೆದುಕೊಳ್ಳಬಹುದೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯಗಳನ್ನು ಕೇಳಿದೆ.