ಆತ್ಮಹತ್ಯೆಗೈದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಹಾಗೂ ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಅವರು ತನ್ನ ಮಾನಹಾನಿಗೈದ ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ 200 ಕೋಟಿ ಪರಿಹಾರ ಕೋರಿ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಅರ್ನಬ್ ಮತ್ತು ಅವರ ತಂಡ ತನಗೆ ಮಾನಹಾನಿ ಮತ್ತು ಕಿರುಕುಳ ನೀಡಿದ ಹಲವಾರು ನಿದರ್ಶನಗಳನ್ನು ಸಂದಿಪ್ ಅವರ ವಕೀಲ ರಾಜೇಶ್ ಕುಮಾರ್ ಅಕ್ಟೋಬರ್ 14ರಂದು ನೀಡಿದ ನೋಟಿಸ್ ನಲ್ಲಿ ದಾಖಲಿಸಿದ್ದಾರೆ. ಅರ್ನಬ್ ಅವರು ನನ್ನ ವಿರುದ್ಧ ಮಾಡಲಾದ ಆರೋಪಗಳಿಗೆ ಇದು ದಂಡ ತೆರಬೇಕಾದ ಸಮಯ ಎಂದು ಸಂದೀಪ್ ಅವರು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ
ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಂದೀಪ್, ಈ ಸುದ್ದಿ ಚಾನೆಲ್ ತನಗೆ ಕ್ರಿಮಿನಲ್ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಹಲವು ಸಂದೇಶಗಳನ್ನು ರವಾನಿಸಿದೆ ಎಂದು ಹೇಳಿಕೊಂಡಿದ್ದಾರೆ. ರಿಪಬ್ಲಿಕ್ ಟಿವಿ ಮತ್ತು ಅರ್ನಾಬ್ ಅವರು, ಸಂದೀಪ್ ಅವರನ್ನು ‘ಪ್ರಮುಖ ಸಂಚುಕೋರ’ ಮತ್ತು ‘ಕೊಲೆಗಾರ’ ಎಂದು ತಮ್ಮ ಕಾರ್ಯಕ್ರಮದಲ್ಲಿ ಕರೆದಿದ್ದಾರೆ ಎಂದು ಕಾನೂನು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಅರ್ನಬ್ ಅವರ ಆರೋಪಗಳಿಗೆ ಸಂದೀಪ್ ಅವರು 200 ಕೋಟಿ ರೂಪಾಯಿ ಪರಿಹಾರ ಕೋರಿದ್ದು, ಅರ್ನಾಬ್ ನನ್ನ ಜೊತೆ ಕ್ಷಮೆ ಕೇಳುವಂತೆ ಕೂಡಾ ಆಗ್ರಹಿಸಿದ್ದಾರೆ. ಸಂದೀಪ್ ಸಿಂಗ್ ಬಗ್ಗೆ ಇರುವ ಎಲ್ಲಾ ದುರುದ್ದೇಶಪೂರಿತ ದೃಶ್ಯಾವಳಿಗಳು, ಲೇಖನಗಳು ಮತ್ತು ವರದಿಗಳನ್ನು ತೆಗೆದುಹಾಕುವಂತೆ ಮತ್ತು ಅವರ ಪ್ರಾಮಾಣಿಕತೆಯ ಬಗ್ಗೆ ನೈಜ ವರದಿಯನ್ನು ಪ್ರಸಾರಿಸಿ ರಿಪಬ್ಲಿಕ್ ಚಾನೆಲ್ ಅವರೊಂದಿಗೆ ಕ್ಷಮೆ ಯಾಚಿಸುವಂತೆ ಈ ನೋಟೀಸಿನಲ್ಲಿ ಕೇಳಲಾಗಿದೆ.
15 ದಿನಗಳ ಒಳಗೆ ನೋಟಿಸ್ ಉತ್ತರ ನೀಡದಿದ್ದಲ್ಲಿ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಸಂದೀಪ್ ಮಾಹಿತಿ ನೀಡಿದ್ದಾರೆ. ಈ ನೋಟಿಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂದೀಪ್, “ನನ್ನ ವಿರುದ್ಧದ ಸುದ್ದಿಗಳಿಗಾಗಿ ಇದು ದಂಡ ತೆರಬೇಕಾದ ಸಮಯ” ಎಂದು ಇನ್ಸ್ಟಾಗ್ರಾಮಿನಲ್ಲಿ ಬರೆದುಕೊಂಡಿದ್ದಾರೆ.