ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರ ನೂತನ ಕೃಷಿ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಜ.26ರಂದು ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಬಿಜೆಪಿ ಕಾರ್ಯಕರ್ತ, ನಟ ದೀಪ್ ಸಿಧುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಏಳು ದಿನಗಳ ಪೊಲೀಸ್ ಕಸ್ಟಡಿ ಮುಗಿದ ಬಳಿಕ, ಸಿಧುನನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ಜೀತ್ ಕೌರ್ ಅವರ ಮುಂದೆ ಹಾಜರು ಪಡಿಸಲಾಯಿತು. ಸದ್ಯ ತಿಹಾರ್ ಜೈಲಿನಲ್ಲಿರುವ ದೀಪ್ ಸಿಧುನನ್ನು ಅಲ್ಲಿಂದಲೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಯಿತು.
ಫೆ.9ರಂದು ಸಿಧುನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಬಳಿಕ, ಫೆ.16ರಂದು ಮತ್ತೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಸ್ತರಿಸಲಾಗಿತ್ತು. ಈಗ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜ.26ರಂದು ಸಿಧು ಕೆಂಪುಕೋಟೆ ಹತ್ತಿ ದಾಂಧಲೆ ನಡೆಸಲು ಪ್ರತಿಭಟನಕಾರರಿಗೆ ಕುಮ್ಮಕ್ಕು ನೀಡಿದ್ದನೆಂದು ಆಪಾದಿಸಲಾಗಿದೆ. ಆ ಬಳಿಕ, ದೀಪ್ ಸಿಧು ಬಿಜೆಪಿ ನಾಯಕರೊಂದಿಗೆ ಇರುವ ಫೋಟೊಗಳು ವೈರಲ್ ಆಗಿದ್ದು, ಆತನ ಬಿಜೆಪಿ ನಂಟಿನ ಬಗ್ಗೆ ಭಾರೀ ಚರ್ಚೆಗಳಾಗಿದ್ದವು. ರೈತರ ಹೋರಾಟದ ದಿಕ್ಕು ತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು.