ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಮಳೆ ಇಳಿಮುಖವಾಗಿದೆ. ಉಪ್ಪಿನಂಗಡಿಯಲ್ಲಿ 5 ಸೆಂ.ಮೀ. ಮಳೆಯಾಗಿರುವುದು ರಾಜ್ಯದಲ್ಲಿಯೇ 24 ಗಂಟೆಗಳಲ್ಲಿ ದಾಖಲಾದ ಅತಿಹೆಚ್ಚಿನ ಮಳೆ ಪ್ರಮಾಣವಾಗಿದೆ.
ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಮಾಣಿ, ಪಣಂಬೂರು, ಧರ್ಮಸ್ಥಳ, ಬೆಳ್ತಂಗಡಿ, ಉಡುಪಿ ಜಿಲ್ಲೆಯ ಕೋಟ, ಉಡುಪಿ, ಕಾರ್ಕಳ, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ, ಕಳಸದಲ್ಲಿ 3 ಸೆಂ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನ ವಿದ್ಯಾಪೀಠ, ಬನಶಂಕರಿಯಲ್ಲಿ ತಲಾ 2.7 ಸೆಂ.ಮೀ, ರಾಜರಾಜೇಶ್ವರಿ ನಗರ, ಹೆಮ್ಮಿಗೆಪುರ, ಎಚ್. ಗೊಲ್ಲಹಳ್ಳಿಯಲ್ಲಿ ತಲಾ 2.5 ಸೆಂ.ಮೀ, ಕೆಂಗೇರಿ, ಉತ್ತರಹಳ್ಳಿಯಲ್ಲಿ ತಲಾ 1.75 ಸೆಂ.ಮೀ ಮಳೆಯಾಗಿದೆ.
ಮುಂದಿನ ಎರಡು ದಿನಗಳು ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆ ಸುರಿಯಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿಯ ಜಿಲ್ಲೆಗಳ ಹಲವೆಡೆ ಮಳೆಯಾಗಲಿದೆ.