ಜಿಂಬಾಬ್ವೆ ವಿರುದ್ಧ ಭಾರತಕ್ಕೆ 23 ರನ್‌ಗಳ ಜಯ

Prasthutha|

ಹರಾರೆ: ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಂದು ನಡೆದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಂಗ್ ಇಂಡಿಯಾ, ಆತಿಥೇಯ ತಂಡವನ್ನು 23 ರನ್​ಗಳಿಂದ ಮಣಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭ್ಮನ್ ಗಿಲ್ ನಾಯಕತ್ವದ ಭಾರತ ಯುವ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

- Advertisement -

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶುಭ್ಮನ್ ಗಿಲ್ ಅವರ ಅಮೋಘ ಅರ್ಧಶತಕ ಮತ್ತು ರುತುರಾಜ್ ಗಾಯಕ್ವಾಡ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 182 ರನ್‌ಗಳನ್ನು ಕಲೆಹಾಕಿತು.

183 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಡಿಯೋನ್ ಮೈಯರ್ಸ್ ಅವರ ಏಕೈಕ ಅರ್ಧಶತಕದ ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 159 ರನ್‌ಗಳಷ್ಟೇ ಮಾಡಿ 23 ರನ್‌ಗಳ ಸೋಲೊಪ್ಪಿಕೊಂಡಿತು.

- Advertisement -

ಜಿಂಬಾಬ್ವೆ ತಂಡದ ಇನ್ನಿಂಗ್ಸ್ ಆರಂಭಿಸಿದ ವೆಸ್ಲಿ ಮಾಧೆವೆರೆ ಮತ್ತು ತಡಿವಾನಾಶೆ ಮರುಮಣಿ ದೊಡ್ಡ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ. ತಂಡವು 3.1 ಓವರ್‌ಗಳಲ್ಲಿ 19 ರನ್‌ಗಳಾಗಿದ್ದಾಗ ಅಗ್ರ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಈ ವೇಳೆ ಡಿಯೋನ್ ಮೈಯರ್ಸ್ 49 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 65 ರನ್ ಗಳಿಸಿ ಪ್ರತಿರೋಧ ನೀಡಿದ ಏಕೈಕ ಜಿಂಬಾಬ್ವೆ ಬ್ಯಾಟರ್. ನಾಯಕ ಸಿಕಂದರ್ ರಝಾ 16 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದರೆ, ಕೊನೆಯಲ್ಲಿ ಕ್ಲೈವ್ ಮದಂಡೆ 26 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 37 ರನ್ ಗಳಿಸಿದರೆ, ವೆಲ್ಲಿಂಗ್ಟನ್ ಮಸಕಡ್ಜಾ 18 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ಭಾರತ ತಂಡದ ಪರ 4 ಓವರ್‌ಗಳಲ್ಲಿ 15 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಅವೇಶ್ ಖಾನ್ 4 ಓವರ್‌ಗಳಲ್ಲಿ 39 ರನ್ ನೀಡಿ 2 ವಿಕೆಟ್ ಪಡೆದರು. ಖಲೀಲ್ ಅಹ್ಮದ್ 4 ಓವರ್‌ಗಳಲ್ಲಿ 15 ರನ್ ನೀಡಿ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 67 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 36 ರನ್ ಗಳಿಸಿದರೆ, ಶುಭ್ಮನ್ ಗಿಲ್ 49 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಮೇತ 66 ರನ್ ಬಾರಿಸಿದರು. ನಂತರ ಬಂದ ಕಳೆದ ಪಂದ್ಯದ ಶತಕವೀರ ಅಭಿಷೇಕ್ ಶರ್ಮಾ ಕೇವಲ 10 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ಈ ವೇಳೆ ರುತುರಾಜ್ ಗಾಯಕ್ವಾಡ್ 28 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 49 ರನ್ ಗಳಿದರೆ, ಸಂಜು ಸ್ಯಾಮ್ಸನ್ 12 ರನ್ ಗಳಿಸಿದರು. ಜಿಂಬಾಬ್ವೆ ತಂಡದ ಪರ ಬ್ಲೆಸ್ಸಿಂಗ್ ಮುಜರ್ಬಾನಿ, ಸಿಕಂದರ್ ರಝಾ ಎರಡೆರಡು ವಿಕೆಟ್ ಪಡೆದರು.

ಉಭಯ ತಂಡಗಳ ನಡುವಿನ ನಾಲ್ಕನೇ ಟಿ20 ಪಂದ್ಯ ಜುಲೈ 13ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

ಈ ಗೆಲುವಿನ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭ್ಮನ್ ಗಿಲ್ ನಾಯಕತ್ವದ ಭಾರತ ಯುವ ತಂಡ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

Join Whatsapp