ಕೋವಿಡ್-19 ಪ್ರಕರಣಗಳ ಸಂಖ್ಯೆ ಆಧರಿಸಿ ಶಾಲೆಗಳ ಭೌತಿಕ ತರಗತಿ ಸ್ಥಗಿತದ ನಿರ್ಧಾರ : ಸಚಿವ ಬಿ.ಸಿ ನಾಗೇಶ್

Prasthutha|

ಬೆಂಗಳೂರು: ಕೋವಿಡ್-19 ಪ್ರಕರಣಗಳ ಸಂಖ್ಯೆ, ಪಾಸಿಟಿವಿಟಿ ಪ್ರಮಾಣ ಆಧರಿಸಿ ತಾಲೂಕು, ಸ್ಥಳೀಯ ಮಟ್ಟದಲ್ಲಿ ಶಾಲೆ, ಪಿಯು ತರಗತಿಗಳ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿ ಆನ್‌ಲೈನ್ ಕ್ಲಾಸ್/ಪರ್ಯಾಯ ಬೋಧನಾ ವಿಧಾನದ ತರಗತಿ ನಡೆಸುವ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಜಿಲ್ಲಾಧಿಕಾರಿ, ತಹಸೀಲ್ದಾರ್‌ಗಳು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

- Advertisement -


ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಸಚಿವ ನಾಗೇಶ್ ಅವರು ಮಾತನಾಡಿದರು.

‘ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದರೂ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ  ಕಡಿಮೆ ಇದೆ. ಒಂದನೇ ಮತ್ತು 2ನೇ ಅಲೆಯಂತೆ ಆತಂಕ ಪಡುವ ಅಗತ್ಯವಿಲ್ಲ. ವಿದೇಶಗಳಲ್ಲಿ ಮತ್ತು ಭಾರತದಲ್ಲಿ ವರದಿಯಾಗಿರುವ ಪ್ರಕರಣಗಳನ್ನು ಗಮನಿಸಿದರೆ ತೀವ್ರತೆ, ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಮತ್ತು ಅಪಾಯ ಕಡಿಮೆ ಕಾಣಿಸುತ್ತಿದೆ ಎಂದು ತಜ್ಞರು ತಿಳಿಸುತ್ತಿದ್ದಾರೆ. ಅದರಲ್ಲೂ ಮಕ್ಕಳಲ್ಲಿ ಸೋಂಕು ಬಾಧಿಸುವ ಪ್ರಮಾಣ ಈವರೆಗಿನ ಮಾಹಿತಿ ಪ್ರಕಾರ ಕಡಿಮೆಯೇ ಇದೆ. ಹೀಗಾಗಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸುವ ಅಗತ್ಯತೆ ಕಂಡು ಬಂದಿಲ್ಲ. ಈ ಕುರಿತು ತಜ್ಞರ ಜೊತೆ ವಿವರವಾಗಿ ಚರ್ಚಿಸಲಾಗಿದೆ’ ಎಂದು ಸಚಿವ ನಾಗೇಶ್ ತಿಳಿಸಿದರು.

- Advertisement -

‘ಮಕ್ಕಳು ಶೈಕ್ಷಣಿಕವಾಗಿ ಈಗಾಗಲೇ ಸಾಕಷ್ಟು ಕಳೆದುಕೊಂಡಿದ್ದಾರೆ. ಮತ್ತಷ್ಟು ಕಳೆದುಕೊಳ್ಳುವುದು ಬೇಡ. ಆನ್‌ಲೈನ್ ಕ್ಲಾಸ್‌ಗಳು ಭೌತಿಕ ತರಗತಿಗಳಷ್ಟು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಓದು, ಬರಹ ಕಳೆದುಕೊಂಡು ಹಿಂದುಳಿದಿದ್ದಾರೆ. ಹೀಗಾಗಿ, ಭೌತಿಕ ತರಗತಿಗಳನ್ನು ನಿಲ್ಲಿಸುವ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ’ ಎಂದು ಸಚಿವರು ಹೇಳಿದರು.

‘ಶಾಲೆ, ಪಿಯು ಕಾಲೇಜುಗಳಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣ ಬಂದರೂ ಎಲ್ಲ ಮಕ್ಕಳಿಗೆ ಪರೀಕ್ಷೆ ಮಾಡಿಸಬೇಕು. ಮಕ್ಕಳಿಗೆ ಅಗತ್ಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು. ಶಾಲೆಯನ್ನು ಸ್ವಚ್ಛಗೊಳಿಸಿ ನಿಯಮದಂತೆ ಭೌತಿಕ ತರಗತಿಗಳಿಗೆ ರಜೆ ಘೋಷಿಸಬೇಕು. ಮಕ್ಕಳು ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು’ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

‘ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಜನವರಿ 31ರವರೆಗೆ 1ರಿಂದ 9ನೇ ತರಗತಿಗಳ ಭೌತಿಕ ತರಗತಿಗಳನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾತ್ರ ಸ್ಥಗಿತಗೊಳಿಸಲಾಗುತ್ತದೆ. ಆನ್‌ಲೈನ್ ಹಾಗೂ ಪರ್ಯಾಯ ಬೋಧನೆ ಮುಂದುವರೆಯಲಿದೆ’ ಎಂದು ಸಚಿವರು ತಿಳಿಸಿದರು.

ಲಸಿಕೆಗೆ ವೇಗ ನೀಡಿ
15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವರು ಸೂಚಿಸಿದರು.’ಲಸಿಕೆಯಿಂದ 3ನೇ ಅಲೆಯಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿದೆ ಎನ್ನುವುದು ಗೊತ್ತಾಗುತ್ತಿದೆ. ನಿಗದಿತ ಗುರಿಯಂತೆ ಎಲ್ಲ ಅರ್ಹ ಮಕ್ಕಳಿಗೆ ಲಸಿಕೆ ಕೊಡಿಸಬೇಕು. ಮಕ್ಕಳು ಲಸಿಕೆಯಿಂದ ವಂಚಿತರಾಗಬಾರದು. ಈ ಕುರಿತು ಮಕ್ಕಳು, ಪಾಲಕರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು. ಸಭೆಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಆರ್. ವಿಶಾಲ್ ಹಾಗೂ ಪಿಯು ಮಂಡಳಿ ನಿರ್ದೇಶಕರಾದ ಆರ್. ಸ್ನೇಹಲ್ ಉಪಸ್ಥಿತರಿದ್ದರು.



Join Whatsapp