ತಿರುವನಂತಪುರಂ: ಜೈಲಿನಿಂದ ತಪ್ಪಿಸಿಕೊಂಡು ಹೋಗಿ ಮರ ಏರಿ ಕೂತುಕೊಂಡು ಆತ್ಮಹತ್ಯೆ ಮಾಡುವುದಾಗಿ ಕೈದಿಯೊಬ್ಬ ಪೊಲೀಸರನ್ನು ಬೆದರಿಸಿದ ಘಟನೆ ಜಿಲ್ಲೆಯ ಪೂಜಾಪ್ಪುರ ಕಾರಾಗೃಹದಲ್ಲಿ ನಡೆದಿದೆ.
ಸುಭಾಷ್ ಎಂಬ ಅಪರಾಧಿಯೊಬ್ಬ ಕೊಲೆ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ. ಈತ ಪೂಜಾಪ್ಪುರ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡು ಓಡಿ ಹೋಗಿ ಮರ ಹತ್ತಿ ಕೂತಿದ್ದು ತಕ್ಷಣ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಆತನನ್ನು ಮರದಿಂದ ಇಳಿಸುವ ಪ್ರಯತ್ನ ಮಾಡಲಾಗಿದೆ. ಈ ವೇಳೆ ಆತ ಆತ್ಮಹತ್ಯೆ ಬೆದರಿಕೆ ಹಾಕಿದ್ದು, ಪೊಲೀಸರು ಕಂಗಾಲಾಗಿದ್ದಾರೆ.
ಪೂಜಾಪುರ ಕೇಂದ್ರ ಕಾರಾಗೃಹದ ಮುಂದೆ ಈ ನಾಟಕೀಯ ದೃಶ್ಯಗಳು ಕಂಡು ಬಂದಿವೆ. ಅಪರಾಧಿಯನ್ನು ಸಮಾಧಾನಪಡಿಸಲು ಮೂವರು ಪೊಲೀಸ್ ಸಿಬ್ಬಂದಿ ಮರದ ಮೇಲೆ ಹತ್ತಿದಾಗ, ಅವನು ಮರದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ಆರೋಪಿಯನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಆತ ಇದ್ದ ಮರದ ಕೊಂಬೆ ಮುರಿದು ಪೊಲೀಸರು ಬೀಸಿದ್ದ ಬಲೆಗೆ ಬಿದ್ದಿದ್ದಾನೆ.
ಬಳಿಕ ಪೊಲೀಸರು ಆತನನ್ನು ಮೆಡಿಕಲ್ ಚೆಕ್ ಆಪ್ ಮಾಡಿ ಸುಬಾಷ್ ನನ್ನು ಪೊಲೀಸರು ಮತ್ತೆ ಜೈಲಿಗಟ್ಟಿದ್ದಾರೆ.