ಒಂದೇ ಜೈಲಿನಲ್ಲಿ ಒಂದು ವಾರದಲ್ಲಿ ನಾಲ್ವರು ಮುಸ್ಲಿಮರ ಸಾವು: ಕಾಕತಾಳೀಯ ಎಂದ ಪೊಲೀಸರು

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಬರುಯಿಪುರ್ ಕೇಂದ್ರೀಯ ಕರೆಕ್ಷನಲ್ ಹೋಮ್ ನಲ್ಲಿ ಅಬ್ದುಲ್ ರಝಾಕ್, ಝಿಯಾವುಲ್ ಲಸ್ಕರ್, ಅಕ್ಬರ್ ಖಾನ್, ಸೈದುಲ್ ಮುನ್ಸಿ ಎಂಬ ನಾಲ್ವರು ಮುಸ್ಲಿಮ್ ಯುವಕರು ನ್ಯಾಯಾಂಗ ಬಂಧನದಲ್ಲಿದ್ದಾಗ  ಕಳೆದ ಹತ್ತು ದಿನಗಳಲ್ಲಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.

- Advertisement -

ಜುಲೈ ಕೊನೆಯ ವಾರದಲ್ಲಿ ಪಶ್ಚಿಮ ಬಂಗಾಳದ ಪೊಲೀಸರು ಬೇರೆ ಬೇರೆ ಪ್ರಕರಣಗಳಲ್ಲಿ ಈ ನಾಲ್ವರನ್ನು ಕರೆದೊಯ್ದಿದ್ದರು. ಸಾವಿಗೀಡಾದವರ ಮನೆಯವರು, ಈ ಸಾವುಗಳು ಕಾಕತಾಳೀಯ ಎಂಬುದನ್ನು ಒಪ್ಪಲು ತಯಾರಿಲ್ಲ. ಪೊಲೀಸರು ಬೇಕೆಂದೇ ಹಿಂಸಿಸಿ ಸಾಯಿಸಿದ್ದಾರೆ ಎಂದು ಸಂತ್ರಸ್ತ ಎಲ್ಲಾ ಕುಟುಂಬಗಳು ಆಪಾದಿಸಿವೆ.

ಪೊಲೀಸರು ಆರೋಪವನ್ನು ಅಲ್ಲಗಳೆದು ಎಲ್ಲರನ್ನೂ ಒಂದೇ ವಾತಾವರಣದ, ಒಂದೇ ಬಗೆಯ ಸವಲತ್ತು ಇರುವ ಕೋಣೆಗಳಲ್ಲಿ ಇರಿಸಲಾಗಿತ್ತು. ಅವರ ಸಾವು ಕಾಕತಾಳೀಯ ಎಂದಿದ್ದಾರೆ. ಆದರೆ ಇನ್ನೂ ಮನೆಯವರಿಗೆ ಶವಪರೀಕ್ಷೆ ವರದಿಗಳು ಲಭ್ಯವಾಗಿಲ್ಲ.

- Advertisement -

ಝಿಯಾವುಲ್ ಲಸ್ಕರ್

ಬರುಯಿಪುರದ ಬಳಿ ಸುಭಾಷ್ ಪಲ್ಲಿ ಎಂಬಲ್ಲಿ ಝಿಯಾವುಲ್ ಲಸ್ಕರ್ ಅವರು ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಜುಲೈ 25ರಂದು ಕೆಲಸಕ್ಕೆ ಹೋದ ಅವರು ಹಿಂದಿರುಗಲಿಲ್ಲ. 35ರ ಹರೆಯದ ಝಿಯಾವುಲ್ ಬಗ್ಗೆ ಇರುಳೆಲ್ಲ ಚಿಂತೆಗೆ ಬಿದ್ದ ಮನೆಯವರು ಬೆಳಿಗ್ಗೆ ಹುಡುಕಾಟ ಆರಂಭಿಸಿದಾಗ ದರೋಡೆ ಮಾಡಲು ಸಂಚು ಮಾಡಿದ್ದಾನೆ ಎಂದು ಆತನನ್ನು ಪೊಲೀಸರು ಬಂಧಿಸಿರುವುದು ಗೊತ್ತಾಗಿದೆ. ಬರುಯಿಪುರ ಪೊಲೀಸ್ ಠಾಣೆಯಲ್ಲಿ ಬಂಧಿಸಿದ ರಾತ್ರಿ ಮತ್ತು ಮರುದಿನ ಪೊಲೀಸರು ಝಿಯಾವುಲ್ ಲಸ್ಕರ್ ಗೆ ಮಾರಣಾಂತಿಕ ಹಿಂಸೆ ನೀಡಿದ್ದಾರೆ ಎಂದು ಮನೆಯವರು ಆಪಾದಿಸುತ್ತಾರೆ. ಆತನನ್ನು ಬಂಧಿಸಿದ ಮೂರನೆಯ ದಿನ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನ ವಿಧಿಸಿ ಜೈಲಿಗೆ ಕಳುಹಿಸಲಾಗಿದೆ.

ಝಿಯಾವುಲ್ ಲಸ್ಕರ್ ಅವರ ಅಕ್ಕ ಸಬೇರಾ ಬೀಬಿ ಪ್ರಕಾರ, “ಸಾಯುವುದಕ್ಕೆ ಮೂರ್ನಾಲ್ಕು ದಿನ ಮೊದಲು ಆತ ನನ್ನ ಭಾವನನ್ನು ಭೇಟಿಯಾಗಿದ್ದರು. ಭೇಟಿಯ ವೇಳೆ ಆತ ಅಳುತ್ತಿದ್ದ ಮತ್ತು ಕಾರಣವಿಲ್ಲದೆ ಪೊಲೀಸರು ಹೊಡೆಯುತ್ತಿದ್ದಾರೆ ಎಂದು ಹೇಳಿದ್ದ. ನನ್ನ ಸಹೋದರ ಮಾದಕ ವ್ಯಸನಿಯಾಗಿದ್ದರೆ ಪೊಲೀಸರ ಮಾತು ನಂಬಬಹುದಿತ್ತು. ಹಾಗಿಲ್ಲ; ಆತನ ಇಡೀ ದೇಹವನ್ನು ಹುಣ್ಣುಗಳೇಳುವಂತೆ ಪೊಲೀಸರು ಹೊಡೆದಿದ್ದಾರೆ” ಎಂದು ಹೇಳಿದರು.

ಲಸ್ಕರ್ ಸಾವು ಆಗಸ್ಟ್ 1ರಂದು ನಡೆದಿದೆ. ಆಗಸ್ಟ್ 2ರಂದು ಸಾವನ್ನು ಘೋಷಿಸಲಾಗಿದೆ ಎಂದೂ ಮನೆಯವರು ಹೇಳುತ್ತಾರೆ.

ಲಸ್ಕರ್ ಜೊತೆಗೆ ಬಂಧಿತರಾಗಿರುವ ಸುರೊಜಿತ್ ಹಲ್ದರ್ ಮತ್ತು ರಬೀವುಲ್ ಹಲ್ದರ್ ಅವರು ಲಸ್ಕರ್ ಸಾವಿಗೆ ಪೊಲೀಸರ ಚಿತ್ರಹಿಂಸೆ ಕಾರಣ ಎಂದು ಹೇಳಿರುವುದಾಗಿ ಸಬೇರಾ ಬೀಬಿ ಪರ ವಕಾಲತ್ತು ವಹಿಸಿರುವ ತೊನೊಯ್ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ. ನ್ಯಾಯಾಂಗ ಬಂಧನದಲ್ಲಿ ಲಸ್ಕರ್ ಗೆ ಚಿತ್ರಹಿಂಸೆ ಮತ್ತು ಆತನ ಸಾವು ನೋಡಿದ ಇವರಿಬ್ಬರೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ಎಸಿಜೆಎಂ- ಹೆಚ್ಚುವರಿ ಮುಖ್ಯ ನ್ಯಾಯಕ ಮ್ಯಾಜಿಸ್ಟರೇಟ್, ಇವರಿಗೆ ಮಧ್ಯಾವಧಿ ಜಾಮೀನು ನೀಡಿದ್ದು. ಅವರನ್ನು ಇಟ್ಟಿದ್ದ ಜೈಲು ಸೂಕ್ತ ವಾತಾವರಣ ಹೊಂದಿಲ್ಲ, ವಿಚಾರಣೆ ನಡೆಸಲು ಸಹ ಸೂಕ್ತವಾಗಿಲ್ಲ ಎಂದು ಹೇಳಿದ್ದಾರೆ.

ಕುಟುಂಬದವರು ಈ ಸಂಬಂಧ ಮತ್ತೊಮ್ಮೆ ವಿಚಾರಣೆಗೆ ಮನವಿ ಮಾಡಿದ್ದಾರೆ. ಕನಿಷ್ಠ ಇಬ್ಬರಾದರೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮರು ವಿಚಾರಣೆಗೆ ಆಗಸ್ಟ್ 3ರಂದು ಮಾಡಿರುವ ಕೋರ್ಟ್ ಆಜ್ಞೆಯನ್ನು ಪಾಲಿಸಿಲ್ಲ ಎಂದು ಎಸಿಜೆಎಂ ಅವರು ಬರುಯಿಪುರ್ ಕರೆಕ್ಷನ್ ಸೆಂಟರ್ ನ ಸೂಪರಿನ್ ಟೆಂಡೆಂಟರಿಗೆ ನೋಟಿಸ್ ನೀಡಿದ್ದಾರೆ.

ಅಬ್ದುಲ್ ರಝಾಕ್

ಇಬ್ಬರು ಹೆಣ್ಣು ಮಕ್ಕಳ ತಂದೆಯಾದ 34ರ ಹರೆಯದ ಅಬ್ದುಲ್ ರಝಾಕ್ , ಕೋಳಿ ಮಾಂಸದ ವ್ಯವಹಾರ ನಡೆಸುತ್ತಿದ್ದು, ಅದಕ್ಕಾಗಿ ಆಗಾಗ ಬಿಹಾರಕ್ಕೆ ಹೋಗಿ ಬರುತ್ತಾರೆ.

“ಜುಲೈ 24ರಂದು ನಾಲ್ವರು ಸಿವಿಲ್ ಉಡುಗೆಯಲ್ಲಿ ನಮ್ಮ ಮನೆಗೆ ಬಂದು ರಝಾಕ್ ರನ್ನು ಕರೆದೊಯ್ದರು. ಮರುದಿನ ಅವರನ್ನು ಜೈಲಿಗೆ ಹಾಕಿದ್ದರು. ನಾನು ಜು.27ರಂದು ಅವರನ್ನು ಜೈಲಿನಲ್ಲಿ ಭೇಟಿಯಾದೆ. ಆಗ ಅವರು ಸರಿಯಾಗಿಯೇ ಇದ್ದರು. ಜು. 29ರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ನಮ್ಮ ಮನೆಗೆ ಬಂದ ಒಬ್ಬ ಪೊಲೀಸ್ ಸಿಬ್ಬಂದಿ, ರಝಾಕ್ ದೇಹ ಸ್ಥಿತಿ ಗಂಭೀರವಾಗಿದೆ. ಕೂಡಲೆ ಆಸ್ಪತ್ರೆಗೆ ಬರಬೇಕು” ಎಂದು ಕರೆದ ಎಂದು ಅಬ್ದುಲ್ ರಝಾಕ್ ಪತ್ನಿ ಸುಹಾನಾ ಬೀಬಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅಷ್ಟು ಹೇಳುವಾಗ ಸುಹಾನಾ ಅವರ ಕಣ್ಣಂಚಿನಲ್ಲಿ ಕಣ್ಣೀರು ಹರಿಯಿತು. ರಝಾಕ್ ಅವರ ಸೋದರಮಾವ ಸಿರಾಜುಲ್ ರಝಾಕ್ ಈಗ ಸುಹಾನಾ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ರಝಾಕ್ ರನ್ನು ಸಾಯಿಸಿದ ಮೇಲೆ ಆಸ್ಪತ್ರೆಗೆ ತಂದು ಸೇರಿಸಿದ್ದಾರೆ ಎಂದು ಸಿರಾಜುಲ್ ರಝಾಕ್ ಹೇಳಿದರು. ಆಸ್ಪತ್ರೆ ಸಿಬ್ಬಂದಿಯು ಪೊಲೀಸರ ಜೊತೆ ಈ ಸಂಬಂಧ ವಾಗ್ವಾದ ಮಾಡಿದ್ದನ್ನು ನಾನು ಕೇಳಿಸಿಕೊಂಡೆ. ಆದರೆ ಏರು ದನಿಯಲ್ಲಿ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಏನು ಹೇಳಿದರು ಎಂಬುದು ನನಗೆ ಸ್ಪಷ್ವವಿಲ್ಲ ಎಂದೂ ಸಿರಾಜುಲ್ ಹೇಳುತ್ತಾರೆ.

“ನಮಗೆ ನ್ಯಾಯ ಬೇಕು. ನನಗೆ ಕಾನೂನಿನ ಬಗ್ಗೆ ನಂಬಿಕೆ ಇದೆ. ಆದರೆ ನಾವು ಕಾನೂನು ಹೋರಾಟ ನಡೆಸುವಷ್ಟು ಶಕ್ತರಲ್ಲ. ಈ ಸಣ್ಣ ಹೆಣ್ಣು ಮಕ್ಕಳ ಗತಿಯೇನು? ಈ ಸಣ್ಣ ಪ್ರಾಯದ ತಾಯಿಯ ಗತಿ ಏನಾಗಬೇಕು?” ಎಂದು ಸಿರಾಜುಲ್ ಪ್ರಶ್ನಿಸುತ್ತಾರೆ.

ಅಂತ್ಯಸಂಸ್ಕಾರ ನೆರವೇರಿಸಲು ಅಬ್ದುಲ್ ರಝಾಕ್ ದೇಹವನ್ನು ಬಿಟ್ಟುಕೊಟ್ಟ ದಾಖಲೆಯಂತೆ ರಝಾಕ್ ಮರಣವು ಜು.30, ಮಧ್ಯಾಹ್ನ 12.48 ಗಂಟೆಗೆ ನಡೆದಿದೆ. ಒಂದು ಡಕಾಯಿತಿಗೆ ಸಂಚು ನಡೆಸಿದ ಆರೋಪದಲ್ಲಿ ರಝಾಕ್ ಮೇಲೆ ಭಾರತೀಯ ದಂಡ ಸಂಹಿತೆ 399 ಮತ್ತು 402 ವಿಧಿಗಳಡಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸರು ಹೇಳುತ್ತಾರೆ. ಆದರೆ ಪ್ರಥಮ ಮಾಹಿತಿ ವರದಿಯ ಬಗ್ಗೆ ವಿವರಿಸಲು ಪೊಲೀಸರು ತಯಾರಿಲ್ಲ. ಅದರಂತೆ ಬರೂಯಿಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂತಾಲ್ ಬೈಪಾಸ್ ಬಳಿಯ ಹೊಸದಾಗಿ ಕಟ್ಟಿದ ಗೋಡೆಯ ಬಳಿ ಜು.23ರಂದು 10- 12 ಜನರು ಡಕಾಯಿತಿ ನಡೆಸಲು ಹೊಂಚು ಹಾಕುತ್ತಿದ್ದರು.

ಅವರ ಏನು ಮಾತನಾಡುತ್ತಿದ್ದರು, ತಮಗೆ ಏನು ಕೇಳಿಸಿತು ಯಾವುದನ್ನೂ ಪೊಲೀಸರು ಎಫ್ ಐಆರ್ ನಲ್ಲಿ ಹೇಳಿಲ್ಲ. ಪೊಲೀಸರು ರಝಾಕ್ ಜೊತೆಗೆ ಇತರ ಏಳು ಜನರನ್ನು ಸಹ ಬಂಧಿಸಿದ್ದಾರೆ. ಅವರಿಂದ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡು ಬರೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಅಕ್ಬರ್ ಖಾನ್

ಮತ್ತೊಂದು ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದ ಸಂಶಯಿತ ಎಂದು ಬಂಧಿತನಾದ ಅಕ್ಬರ್ ಖಾನ್ ನ್ಯಾಯಾಂಗ ಬಂಧನದಲ್ಲಿರುವಾಗ ಆಗಸ್ಟ್ 2ರಂದು ಸಾವಿಗೀಡಾಗಿದ್ದಾನೆ ಎಂದು ವಕೀಲ ಅಸ್ಫಾಕ್ ಅಹ್ಮದ್ ತಿಳಿಸಿದ್ದಾರೆ. ಅಕ್ಬರ್ ಖಾನ್ ದೇಹದ ಮೇಲೆ ಚಿತ್ರಹಿಂಸೆಯ ಗುರುತುಗಳಿದ್ದವು. ಆತನ ಕುಟುಂಬಕ್ಕೆ ಇನ್ನೂ ಶವ ಪರೀಕ್ಷೆಯ ವರದಿ ಸಿಕ್ಕಿಲ್ಲ. ಮಾಧ್ಯಮದವರು ಅಕ್ಬರ್ ಖಾನ್ ಅವರ ಪತ್ನಿ ಅಂಜುಹರ್ ರನ್ನು ಮಾತನಾಡಿಸಲು ಪ್ರಯತ್ನಿಸಿದರಾದರೂ ದಿಗ್ಭ್ರಮೆಗೊಳಗಾಗಿರುವ ಅವರು ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಸೈದುಲ್ ಮುನ್ಶಿ

ಮಹೇಸ್ತಲ ಪೊಲೀಸರು ಜು.25ರಂದು 33ರ ಪ್ರಾಯದ ಸೈದುಲ್ ಮುನ್ಶಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ.  ಬಂಧಿಸಿದ ಮೊದಲ ದಿನ ಚಿತ್ರಹಿಂಸೆ ನೀಡಿದ ಪೊಲೀಸರು ಮರುದಿನ ಬರುಯಿಪುರ ಜೈಲಿಗೆ ಕಳುಹಿಸಿದ್ದಾರೆ ಎಂದು ಮನೆಯವರು ಹೇಳುತ್ತಾರೆ.

ಆಗಸ್ಟ್ 1ರಂದು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ನಮಗೆ ಮಾಹಿತಿ ನೀಡಿರಲಿಲ್ಲ ಎಂದ ಮುನ್ಶಿಯ ಅಕ್ಕ ಸಲ್ಮಾ ಅವರು “ನಮಗೆ ಆಗಸ್ಟ್ 2ರಂದಷ್ಟೆ ವಿಷಯ ಗೊತ್ತಾಯಿತು. ಪೊಲೀಸರು ದಾಖಲೆಗೆ ಸಹಿ ಮಾಡಿಸಿಕೊಳ್ಳಲು ಮನೆಗೆ ಬಂದಾಗ ದೊಡ್ಡವರು ಯಾರೂ ಮನೆಯಲ್ಲಿ ಇರಲಿಲ್ಲ. ಅದು ಯಾವ ದಾಖಲೆ ಎಂದು ನಮಗೆ ಯಾರಿಗೂ ಗೊತ್ತಿಲ್ಲ. ಆದರೆ ಪೊಲೀಸರು ನಮ್ಮ ಚಿಕ್ಕ ತಂಗಿಯಿಂದ ಸಹಿ ಮಾಡಿಸಿಕೊಂಡು ಹೋಗಿದ್ದಾರೆ. ಮುನ್ಶಿಗೆ ಯಾವುದೇ ಚಿಕಿತ್ಸೆ ನೀಡಿಲ್ಲ. ಆಗಸ್ಟ್ 3ರಂದು ಸತ್ತಿರುವುದಾಗಿ ಘೋಷಿಸಲಾಗಿದೆ. ತುಂಬ ಕೆಟ್ಟದಾಗಿ ಪೊಲೀಸರು ಆತನಿಗೆ ಹೊಡೆದಿದ್ದಾರೆ. ಅದೇ ಸಾವಿಗೆ ಕಾರಣವಾಗಿದೆ. ಆತನನ್ನು ಯಾರು ಕೊಂದರೆಂಬುದು ನಮಗೆ ಗೊತ್ತಿಲ್ಲ. ಆದರೆ ಆತನು ಜೈಲಿನಲ್ಲಿ ಇರುವಾಗ ಸತ್ತ ಎನ್ನುವುದು ಗೊತ್ತಾಗಿದೆ. ನೀವೇನಾದರೂ ಆತನ ಮುಖ ನೋಡಿದ್ದರೆ ಅಲ್ಲೇ ಕುಸಿದು ಬೀಳುತ್ತಿದ್ದೀರಿ, ಆತನ ಸ್ಥಿತಿ ಅಷ್ಟು ಚಿಂತಾಜನಕವಾಗಿತ್ತು” ಎಂದು ಹೇಳಿದರು.

ಮುಸ್ಲಿಮರಿಗೆ ಸಿಗುವ ಆತಿಥ್ಯಗಳ ಬಗ್ಗೆ ಚಿಂತಿಸಬೇಕಾಗಿದೆ

ಎಪಿಡಿಆರ್- ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಂಜಿತ್ ಸೂರ್ ಅವರು “ಪಶ್ಚಿಮ ಬಂಗಾಳದ ಪ್ರತಿಯೊಂದು ರಾಜಕೀಯ ಪಕ್ಷದ ನಾಯಕರೂ ಕೊಲ್ಕತ್ತಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಆದ ಹುಡುಗನೊಬ್ಬನ ಸಾವಿನ ಬಗೆಗೆ ಮಾತನಾಡುತ್ತಾರೆ. ಆದರೆ ನಾಲ್ವರು ಮುಸ್ಲಿಮರನ್ನು ಒಂದೇ ಬಗೆಯ ಆರೋಪದಲ್ಲಿ ಬಂಧಿಸಲಾಗಿದೆ ಮತ್ತು ಬರುಯಿಪುರ್ ಜೈಲಿನಲ್ಲಿ ಒಂದೇ ವಾತಾವರಣದಲ್ಲಿ ಇಡಲಾಗಿದೆ. ಆ ನಾಲ್ಕು ಜನರು ಒಂದು ವಾರದಲ್ಲಿ ನ್ಯಾಯಾಂಗ ಬಂಧನದಲ್ಲೆ ಸಾವಿಗೀಡಾಗಿದ್ದಾರೆ. ಆದರೆ ಯಾವ ರಾಜಕೀಯ ಪಕ್ಷವೂ ಈ ಬಗ್ಗೆ ತುಟಿ ಬಿಚ್ಚಿಲ್ಲ. ಇದು ದಿಗಿಲುಗೊಳಿಸುವ ಸಂಗತಿ. ಈ ಸಾವುಗಳ ಬಗ್ಗೆ ಒಂದು ಸ್ವತಂತ್ರ ತನಿಖೆ ಆಗಬೇಕೆಂದು ನಾವು ಬಯಸುತ್ತೇವೆ. ದಕ್ಷಿಣ 24 ಪರಗಣ ಜಿಲ್ಲೆಯ ಪೊಲೀಸರು ಇಂಥ ಪ್ರಕರಣಗಳಲ್ಲಿ ನಿಸ್ಸೀಮರಿದ್ದಾರೆ. ಮುಖ್ಯವಾಗಿ ದಲಿತರು ಮತ್ತು ಮುಸ್ಲಿಮರಿಗೆ ಸಿಗುವ ಇಂಥ ಆತಿಥ್ಯದ ಬಗ್ಗೆ ನಾವು ಚಿಂತಿಸಬೇಕಾಗಿದೆ.” ಎಂದು ಹೇಳಿದರು.

ಎಪಿಡಿಆರ್- ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯ ಒಕ್ಕೂಟವು ಈ ನಾಲ್ಕೂ ಪ್ರಕರಣಗಳನ್ನು ತಾನೇ ಗಮನಿಸಲು ನಿರ್ಣಯಿಸಿದ್ದು ಅವುಗಳ ಬಗೆಗೆ ಸತ್ಯ ಶೋಧನೆ ವರದಿಯೊಂದನ್ನು ತಯಾರಿಸಲು ತೊಡಗಿದೆ.

ಕೊಲ್ಕತ್ತಾ ಹೈಕೋರ್ಟ್ ವಕೀಲ ಹಾಗೂ ಕಾಂಗ್ರೆಸ್ ನಾಯಕರಾದ ಅಸ್ಫಾಕ್ ಅಹ್ಮದ್ ಅವರ ತಂಡವು ಆಗಸ್ಟ್ 7ರಂದು ಸಂತ್ರಸ್ತರ ನಾಲ್ಕೂ ಮನೆಗಳಿಗೆ ಭೇಟಿ ನೀಡಿ ಕಾನೂನು ಸಹಕಾರದ ಭರವಸೆ ನೀಡಿದೆ. “ನಾಲ್ಕೂ ಪ್ರಕರಣಗಳು ಒಂದೇ ಮಾದರಿಯಲ್ಲಿ ಇರುವುದರಿಂದ, ಆ ನಾಲ್ಕನ್ನೂ ಒಗ್ಗೂಡಿಸಿ ಒಂದು ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ ಎಂದು ಅಸ್ಫಾಕ್ ಅಹ್ಮದ್ ರು “ದಿ ವೈರ್” ಗೆ ತಿಳಿಸಿದರು.

ಆ ನಾಲ್ಕೂ ಜನರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು. ಹಿಂದೆ ಮಾದಕ ದ್ರವ್ಯ ಮಾರಾಟದ ಸಂಬಂಧ ಆ ನಾಲ್ವರ ಮೇಲೂ ಮೊಕದ್ದಮೆಗಳಿದ್ದವು ಎಂದು ಪೊಲೀಸರು ಹೇಳಿದರು. ರಝಾಕ್ ಮತ್ತು ಲಸ್ಕರ್ ಮಾದಕ ದ್ರವ್ಯ ಸೇವಿಸುತ್ತಿದ್ದರು ಮತ್ತು ಮಾರಾಟ ಮಾಡುತ್ತಿದ್ದರು ಎಂದು ಸಹ ಪೊಲೀಸರು ಹೇಳುತ್ತಾರೆ.

“ಪೊಲೀಸರು ಚಿತ್ರಹಿಂಸೆ ನೀಡಿದರು ಎನ್ನುವುದು ಸರಿಯಲ್ಲ, ತಪ್ಪು” ಎಂದು ಪೊಲೀಸ್ ಮೂಲಗಳು ಹೇಳುತ್ತವೆ. “ಈ ನಾಲ್ವರು ಒಬ್ಬರ ಬಳಿಕ ಒಬ್ಬರು ಕೆಲವೇ ದಿನಗಳಲ್ಲಿ ಸತ್ತಿರುವುದು ಕಾಕತಾಳೀಯ. ನಾವು ಪೋಸ್ಟ್ ಮಾರ್ಟಂ ವರದಿಗೆ ಕಾಯುತ್ತಿದ್ದೇವೆ. ಅದು ಬರುತ್ತಲೇ ಮುಂದಿನ ತನಿಖೆ ಆರಂಭವಾಗುತ್ತದೆ” ಎಂದೂ ಪೊಲೀಸರು ತಿಳಿಸಿದರು.

ಬರುಯಿಪುರ ಪೊಲೀಸರ ಕಸ್ಟಡಿಯಲ್ಲಿ ನಾಲ್ವರ ಸಾವಾಗಿದೆ ಎಂಬುದನ್ನು ಅಲ್ಲಗಳೆದು ಆಗಸ್ಟ್ 7ರಂದು ಬರುಯಿಪುರ ಪೊಲೀಸರು ಫೇಸ್ ಬುಕ್ ನಲ್ಲಿ ಮಾಹಿತಿ ಹಾಕಿದ್ದಾರೆ. ಆದರೆ ಆ ನಾಲ್ವರೂ ನ್ಯಾಯಾಂಗ ಬಂಧನದಲ್ಲಿ ಇದ್ದಾಗ ಸತ್ತರು ಎನ್ನುವುದನ್ನು ಪೊಲೀಸ್ ಮೂಲಗಳು ಖಚಿತಪಡಿಸಿವೆ.

(ಕೃಪೆ: ದಿ ವೈರ್)



Join Whatsapp