ಡಿಕೆ ಶಿವಕುಮಾರ್ ವಿರುದ್ಧ 15 ಪರ್ಸೆಂಟ್ ಕಮಿಷನ್ ಆರೋಪ: ಬಿಬಿಎಂಪಿ ಗುತ್ತಿಗೆದಾರರ ಸಂಘದಿಂದ ಟ್ವೀಟ್

Prasthutha|

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿ ಅಧಿಕಾರಿಕ್ಕೆ ಬಂದ ಕಾಂಗ್ರೆಸ್ ವಿರುದ್ಧವೇ ಇದೀಗ ಕಮಿಷನ್ ಆರೋಪಗಳು ಕೇಳಿಬರುತ್ತಿವೆ. ಸಚಿವರ ನಂತರ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ 10-15 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘವು ಕಾಂಗ್ರೆಸ್ ಹೈಕಮಾಂಡ್ ಗೆ ದೂರು ನೀಡಿದೆ.

- Advertisement -

40 ಪರ್ಸೆಂಟ್ ಕಮಿಶನ್ ಆರೋಪ ಮುಂದಿಟ್ಟುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಇದೀಗ ಇದೆ ಕಾಂಗ್ರೆಸ್ ನ ಡಿಸಿಎಂ 10-15 ಪರ್ಸೆಂಟ್ ಕಮಿಶನ್ ಕೇಳುತ್ತಿದ್ದಾರೆ. ದಯವಿಟ್ಟು ನಮ್ಮ ಹಣ ಬಿಡುಗಡೆ ಮಾಡಿ ಎಂದು ಟ್ವೀಟ್ ಮಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘವು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ಯಾಗ್ ಮಾಡಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಆಗುತ್ತಿವೆ. ಈಗಲೇ ಸಚಿವರ ವಿರುದ್ಧ ಭ್ರಷ್ಟಾಚಾರದಂತಹ ಗಂಭೀರ ಆರೋಪಗಳು ಕೇಳಿರುತ್ತಿವೆ. ವಿರೋಧ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ, ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಕಮಿಷನ್ ಆರೋಪಗಳನ್ನು ಮಾಡುತ್ತಿವೆ. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ವಿರುದ್ಧ ಕಮಿಷನ್ ಆರೋಪ ಕೇಳಿಬಂದಿದೆ.

- Advertisement -

ಬಾಕಿ ಬಿಲ್ ಪಾವತಿಗಾಗಿ ಗುತ್ತಿಗೆದಾರರಿಂದ 15 ಪರ್ಸೆಂಟ್ ವರೆಗೆ ಕಮಿಷನ್ ನೀಡುವಂತೆ ಡಿಕೆ ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಆರೋಪ ಮಾಡಿದ್ದಾರೆ. ನಾವು ಮಾಡುತ್ತಿರುವ ಆರೋಪ ಸುಳ್ಳು ಎಂದು ಹೇಳುವುದಾದರೆ ಡಿಕೆ ಶಿವಕುಮಾರ್ ಅವರು, ಅವರ ಆರಾಧ್ಯ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಗುತ್ತಿಗೆದಾರರು ಸವಾಲೆಸೆದಿದ್ದಾರೆ.

Join Whatsapp