ದಾವಣಗೆರೆ: ನಗರದ ಮಹಾನಗರ ಪಾಲಿಕೆಯ ಸ್ಟ್ರಾಂಗ್ ರೂಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾಸ್ಸ್ಟೆೇಬಲ್ ಗುರುಮೂರ್ತಿ ಅವರಿಗೆ ಗುಂಡೇಟು ತಗುಲಿದ್ದು, ಚಿಕಿತ್ಸೆಯಲ್ಲಿದ್ದಾರೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಈ ಕುರಿತು ಪ್ರತಿಕ್ರಿಯಿಸಿದ್ದು, ನಗರದ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ಗುರುಮೂರ್ತಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಯಾವುದೇ ರೀತಿಯಲ್ಲಿಯೂ ಪ್ರಾಣಕ್ಕೆ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ವಾಸಿಯಾದ ಗುರುಮೂರ್ತಿ (34) ಎಂದು ಗುರುತಿಸಲಾಗಿದೆ. 2011-12ರ ಬ್ಯಾಚ್ ನವರಾಗಿದ್ದ ಗುರುಮೂರ್ತಿ 21ನೇ ವಯಸ್ಸಿಗೆ ಕೆಲಸಕ್ಕೆ ಸೇರಿದ್ದರು.ಗುಂಡು ಹಾರಿಸಿಕೊಂಡು ಕೆಳಗಡೆ ಬಿದ್ದ ಗುರುಮೂರ್ತಿ ಅವರು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದರು. ರಕ್ತದ ಮಡುವಿನಲ್ಲಿದ್ದ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಕೆಲ ದಿನಗಳಿಂದ ಇವಿಎಂ ಯಂತ್ರಗಳ ಕಾವಲು ಕಾಯುವ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಆಸ್ಪತ್ರೆಗೆ ಐಜಿಪಿ ತ್ಯಾಗರಾಜನ್ ಅವರ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ ಎಸ್ಪಿ ಉಮಾ ಪ್ರಶಾಂತ್, ಗುರುಮೂರ್ತಿ ಕುಟುಂಬದವರು ಹಾಗೂ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸ್ ಕಾನ್ಸ್ಟೇಬಲ್ ಗುರುಮೂರ್ತಿ ಅವರ ಭುಜಕ್ಕೆ ಗುಂಡು ತಗುಲಿದೆ ಎಂದು ತಿಳಿಸಿದರು.
ಘಟನೆ ನಡೆದ ಕೂಡಲೇ ಆಯಂಬುಲೆನ್ಸ್ ಅವರಿಗೆ ಕರೆ ಮಾಡಲಾಗಿದೆ. ಆದರೆ ಅರ್ಧ ಗಂಟೆಯಾದರೂ ಆಯಂಬುಲೆನ್ಸ್ ಸ್ಥಳಕ್ಕೆ ಬಾರದಿದ್ದಕ್ಕೆ ಸ್ಥಳದಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದು, ಅರ್ಧ ಗಂಟೆಯಾದರೂ ಆಯಂಬುಲೆನ್ಸ್ ಬಾರದ ಕಾರಣಕ್ಕ ಕೊನೆಗೆ ಪೊಲೀಸ್ ಜೀಪಿನಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದರು.
ಗುರುಮೂರ್ತಿ ಅವರು ಪತ್ನಿ ಜೊತೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಗುಂಡಿನ ಸದ್ದು ಕೇಳಿದೆ. ಪತ್ನಿ ಹಾಗೂ ಅವರ ಗುರುಮೂರ್ತಿ ಅವರ ತಂದೆ ಕೂಡಲೇ ಘಟನಾ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಬಳಿಕ ಪೊಲೀಸರೊಂದಿಗೆ ಗುರುಮೂರ್ತಿ ಅವರನ್ನು ಆಸ್ಪತ್ರೆ ಸೇರಿಸಲಾಗಿದೆ.