ಬೆಂಗಳೂರು: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಒತ್ತಾಯಿಸಿ ಮಾ.20ರಂದು ಆಟೋ ಸಂಚಾರ ಬಂದ್

Prasthutha|

►ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಿರುವ ಆಟೋ ಚಾಲಕರು

- Advertisement -

ಬೆಂಗಳೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ರ‍್ಯಾಪಿಡೋ ಬೈಕ್​ ಟ್ಯಾಕ್ಸಿಯನ್ನು ನಿಷೇಧಿಸಲು ಒತ್ತಾಯಿಸಿರುವ ಆಟೋ ಚಾಲಕರ‌ ಸಂಘಟನೆಗಳು ಮಾರ್ಚ್​ 20 ರಂದು ಬೆಂಗಳೂರಲ್ಲಿ ಆಟೋ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿವೆ.

ಪ್ರೆಸ್​​​ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಆಟೋ ಚಾಲಕರಿಗೆ ಮಾರಕವಾಗಿರುವ ಅಕ್ರಮ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳ ನಿಷೇಧಿಸುವಂತೆ ಕಳೆದ 3 ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಆಟೋ ಚಾಲಕರ ಬಗ್ಗೆ ನಿರ್ಲಕ್ಷ್ಯವಹಿಸುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಕಪ್ಪು ಬಾವುಟವನ್ನು ಆಟೋಗಳಲ್ಲಿ ಕಟ್ಟಿಕೊಂಡು ಇತರೆ ರಾಜ್ಯಗಳಲ್ಲಿ ನಿಷೇಧಿಸಿರುವಂತೆ ನಮ್ಮ ರಾಜ್ಯದಲ್ಲಿ ನಿಷೇಧಿಸುವವರೆಗೆ ಆಟೋ ಚಾಲಕರಿಂದ ನಿರಂತರ ಹೋರಾಟ ಮಾಡಲಾಗುವುದು ಎಂದರು.

- Advertisement -

2 ದಿನಗಳ‌ ಕಾಲ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ ಸೋಮವಾರ (ಮಾರ್ಚ್​ 20) ರಂದು ಬೆಂಗಳೂರಲ್ಲಿ ಆಟೋ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ. ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮನೆಗೆ ಮುತ್ತಿಗೆ ಹಾಕುತ್ತೇವೆ. 2.10 ಲಕ್ಷ ಆಟೋಗಳ ಸಂಚಾರ ಬಂದ್ ಆಗುತ್ತದೆ ಎಂದು ತಿಳಿಸಿದರು.

ನಗರದಲ್ಲಿ ಆಟೋರಿಕ್ಷಾ ಸೇವೆಯು ಸುಮಾರು ಕಳೆದ 60 ವರ್ಷಗಳಿಂದ ಬಿಎಂಟಿಸಿಯ ನಂತರ ಬೆಂಗಳೂರು ನಗರದಲ್ಲಿ ಪ್ರತಿದಿನ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ನೀಡುತ್ತಿದೆ. ಬೆಂಗಳೂರಿನಲ್ಲಿ ಆಟೋರಿಕ್ಷಾ ಬಹುದೊಡ್ಡ ಉದ್ಯಮವಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವಕಾಶವನ್ನು ಕೊಟ್ಟಿದೆ. ಜೊತೆಗೆ ಸರ್ಕಾರಕ್ಕೆ ಚಾಲನಾ ಪತ್ರ ನವೀಕರಣ, ಜೀವಿತಾವಧಿ ತೆರಿಗೆ, ಫಿಟ್‌ನೆಸ್ ಸರ್ಟಿಫಿಕೇಟ್, ಇನ್ಸೂರೆನ್ಸ್, ರಹದಾರಿ ನವೀಕರಣ ಇದಲ್ಲದೆ ದಂಡದ ರೂಪದಲ್ಲಿ ನೇರವಾಗಿ ತೆರಿಗೆ ಪಾವತಿಸುತ್ತಿದ್ದು, ಪರೋಕ್ಷ ತೆರಿಗೆಯಾಗಿ ಹೊಸ ವಾಹನಗಳ ಖರೀದಿ, ಆಟೋರಿಕ್ಷಾಗಳಿಗೆ ಬಳಸುವ ಇಂಧನ, ಬಿಡಿಭಾಗಗಳ ಖರೀದಿ, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಇತರೆ ರೂಪದಲ್ಲಿ ಸರ್ಕಾರದ ಆರ್ಥಿಕತೆಗೆ ತೆರಿಗೆ ಪಾವತಿಸುವ ದೊಡ್ಡ ಉದ್ದಿಮೆಯಾಗಿದೆ. ಪ್ರಸ್ತುತ ಜಾಗತೀಕರಣ, ಡಿಜಿಟಲೀಕರಣ, ವಿದೇಶಿ ನೇರ ಬಂಡವಾಳದ ಆಕರ್ಷಣೆ ಮತ್ತು ಹೊಸ ತಾಂತ್ರಿಕ ಬದಲಾವಣೆಯಿಂದಾಗಿ ಸಾರಿಗೆ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬದಲಾವಣೆಗಳು ಬಂದಿವೆ ಎಂದು ಹೇಳಿದರು.

Join Whatsapp