ಅತಿಯಾದ ಧಾರ್ಮಿಕ ನಂಬಿಕೆಯೇ ‘ವಿದ್ಯಾವಂತ’ ಹೆತ್ತವರು ಮಕ್ಕಳನ್ನೇ ಬಲಿ ನೀಡುವಂತೆ ಮಾಡಿತು!

Prasthutha|

ಹೈದರಾಬಾದ್ : ಅತ್ಯುನ್ನತ ಪದವಿ ಹೊಂದಿದ ವಿದ್ಯಾವಂತ ದಂಪತಿಯಾಗಿದ್ದರೂ ಅತಿಯಾದ ಧಾರ್ಮಿಕ ನಂಬಿಕೆಯೇ ತಮ್ಮಿಬ್ಬರು ಮಕ್ಕಳನ್ನು ಬಲಿ ನೀಡುವಂತಾಗಿದೆ. ಮೊನ್ನೆಯಷ್ಟೇ ಇಬ್ಬರು ಹೆಣ್ಣು ಮಕ್ಕಳನ್ನು ವಿದ್ಯಾವಂತ ಹೆತ್ತವರೇ ಧಾರ್ಮಿಕ ಆಚರಣೆಯ ನೆಪದಲ್ಲಿ ಬಲಿ ನೀಡಿದ ಘಟನೆ ಬಗ್ಗೆ ಕೇಳಿದ್ದೀರಿ. ಇದೀಗ ಮಕ್ಕಳನ್ನು ಬಲಿ ನೀಡಿದ ಹೆತ್ತವರಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

- Advertisement -

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ನಗರದ ಮಾಸ್ಟರ್ ಮೈಂಡ್ ಐಐಟಿ ಟ್ಯಾಲೆಂಟ್ ಸ್ಕೂಲ್ ನ ಪ್ರಾಂಶುಪಾಲೆ ವಿ. ಪದ್ಮಜಾಳನ್ನು ಬಂಧನಕ್ಕೂ ಮೊದಲು ತಾಲೂಕು ಆಸ್ಪತ್ರೆಗೆ ಕೊರೊನ ಪರೀಕ್ಷೆಗೆಂದು ಕರೆ ತರಲಾಗಿತ್ತು. ವಿದ್ಯಾವಂತಳಾಗಿದ್ದೂ, ಪದ್ಮಜಾ ಈ ವೇಳೆ ನೀಡಿರುವ ಹೇಳಿಕೆಯೊಂದು ಎಂತಹವರನ್ನೂ ಬೆಚ್ಚಿಬೀಳಿಸುವಂತದ್ದು.

“ಕೊರೊನ ಚೀನಾದಿಂದ ಬಂದಿದ್ದಲ್ಲ. ಅದು ಶಿವನಿಂದ ಬಂದಿದೆ. ನಾನು ಶಿವ ಮತ್ತು ಕೊರೊನ ಮಾರ್ಚ್ ಬಳಿಕ ಹೋಗಲಿದೆ” ಎಂದು ಪದ್ಮಜಾ ವೈದ್ಯಕೀಯ ಸಿಬ್ಬಂದಿ ಜೊತೆ ಮಾತನಾಡುತ್ತಾ ತಿಳಿಸಿದ್ದಾಳೆನ್ನಲಾಗಿದೆ.

- Advertisement -

ಪದ್ಮಜಾಳ ಪತಿ ಡಾ. ಪುರುಷೋತ್ತಮ ನಾಯ್ಡು ಮದನಪಲ್ಲಿ ಸರಕಾರಿ ಪದವಿ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಕೆಮಿಸ್ಟ್ರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್. ಇವರಿಬ್ಬರೂ ಅತಿಯಾದ ಧಾರ್ಮಿಕ ನಂಬಿಕೆಯಿಂದ ತಮ್ಮ ಸ್ವಂತ ಮಕ್ಕಳಾದ ಅಲೇಖ್ಯ (25) ಮತ್ತು ಸಾಯಿ ದಿವ್ಯಾ (22)ಳನ್ನು ಜ.24ರಂದು ಶಿಕ್ಷಕರ ಕಾಲನಿ ಪ್ರದೇಶದ ತಮ್ಮ ಮನೆಯ ಬಳಿ ಡಂಬಲ್ಸ್ ನಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ವೈದ್ಯಕೀಯ ತಪಾಸಣೆಯ ವೇಳೆ ಪದ್ಮಜಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದಳಾದರೂ, ಪುರುಷೋತ್ತಮ ಯಾವುದೇ ಅಡ್ಡಿ ಪಡಿಸದೆ ಸುಮ್ಮನೆ ನಿಂತಿದ್ದ. ಘಟನೆಯ ಬಗ್ಗೆ ಕೇಳಿದಾಗ, ‘ಯಾವ ಹೇಳಿಕೆಯೂ ಇಲ್ಲ’ ಎಂದಿದ್ದಾನೆ.

ಮಂಗಳವಾರ ಸಂಜೆ ಇಬ್ಬರನ್ನೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ. ಆದರೆ, ಇಬ್ಬರೂ ಏನೂ ನಡೆದಿಲ್ಲ ಎಂಬಂತೆ ಶಾಂತಚಿತ್ತರಾಗಿದ್ದರು. ನ್ಯಾಯಾಧೀಶರು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

“ಇಡೀ ಕುಟುಂಬವೇ ತೀವ್ರ ಧಾರ್ಮಿಕ ನಂಬಿಕೆಗೊಳಗಾಗಿತ್ತು ಎಂಬಂತೆ ಕಂಡುಬರುತ್ತಿದೆ. ಇದರಿಂದಾಗಿಯೇ ಈ ಸಾವುಗಳು ಸಂಭವಿಸಿವೆ” ಎಂದು ಮದನಪಲ್ಲಿ ಡಿಎಸ್ ಪಿ ರವಿ ಮನೋಹರ್ ಆಚಾರಿ ಹೇಳಿದ್ದಾರೆ. ಬಂಧಿತ ದಂಪತಿಯ ಸಂಬಂಧಿಗಳು, ನೆರೆಹೊರೆಯವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಪುರುಷೋತ್ತಮ ನಾಯ್ಡು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಮಾಸ್ಟರ್ ಮೈಂಡ್ ಸ್ಕೂಲ್ ನ ಮಾಜಿ ಶಿಕ್ಷಕರೊಬ್ಬರನ್ನು ಸಂಪರ್ಕಿಸಿದ್ದ. ಹೀಗಾಗಿ ಅವರು ಈ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಸಿಕ್ಕಿದ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಅಲ್ಲಿ ಎಂಬಿಎ ಪದವೀಧರೆ ಮತ್ತು ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಅಲೇಖ್ಯ ಮತ್ತು ಚೆನ್ನೈನಲ್ಲಿ ಎ.ಆರ್. ರಹ್ಮಾನ್ ಮ್ಯೂಸಿಕ್ ಅಕಾಡೆಮಿಯಲ್ಲಿ ನೃತ್ಯ ವಿದ್ಯಾರ್ಥಿನಿಯಾದ ಸಾಯಿ ವಿದ್ಯಾಳ ಮೃತದೇಹಗಳು ಕಂಡುಬಂದಿದ್ದವು. ಅವರ ತಲೆಗೆ ಡಂಬಲ್ಸ್ ನಿಂದ ಹೊಡೆದು ಸಾಯಿಸಲಾಗಿತ್ತು, ಕೂದಲು ಸುಡಲಾಗಿತ್ತು.  

ಮಕ್ಕಳು ಮತ್ತೆ ಜೀವಂತವಾಗಿ ಬರುತ್ತಾರೆ ಎಂದು ಪದ್ಮಜಾ ಮತ್ತು ಪುರುಷೋತ್ತಮ್ ಹೇಳುತ್ತಿದ್ದರಂತೆ. ಅವರಿಗೇನೂ ಗಾಯಗಳಾಗಿರಲಿಲ್ಲ.

ಆಂಧ್ರ ಪ್ರದೇಶದ ಮದನಪಲ್ಲಿಯ ಈ ಮನೆಯಲ್ಲಿ ಹತ್ಯೆ ನಡೆದಿತ್ತು
Join Whatsapp