ಮೈಸೂರು: ನಮ್ಮ ಹಳ್ಳಿಗಳಿಗೆ ಮುಸ್ಲಿಮರು ಯಾವುದೇ ವ್ಯಾಪಾರಕ್ಕೆ ಬರುತ್ತಿಲ್ಲ. ಆದ್ದರಿಂದ ಪ್ರತಾಪ್ ಸಿಂಹ ನಮ್ಮಲ್ಲಿರುವ ಹಳೆ ಗುಜರಿ ವಸ್ತುಗಳನ್ನು ಕೊಂಡುಕೊಂಡು ಹಣ ನೀಡಬೇಕು ಎಂದು ಒತ್ತಾಯಿಸಿ ಹಳೆ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಸಂಸದರ ಮನೆಯೆದುರು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ನೇತೃತ್ವದಲ್ಲಿ ಗುರುವಾರ ದಸಂಸ ಕಾರ್ಯಕರ್ತರು ಮಹಿಳೆಯರು ಮತ್ತು ಗ್ರಾಮಾಂತರ ಭಾಗದ ಜನರುಗಳು ಚೀಲದಲ್ಲಿ ಹಳೆ ಸಾಮಾನುಗಳನ್ನು ತೆಗೆದುಕೊಂಡು ನಗರದ ವಿಜಯ ನಗರದ ನಾಲ್ಕನೆ ಹಂತದಲ್ಲಿರುವ ಸಂಸದ ಪ್ರತಾಪ್ ಸಿಂಹರ ಮನೆಗೆ ಆಗಮಿಸಿ ಅವರಿಗೆ ಮಾರಾಟ ಮಾಡಲು ಆಗಮಿಸಿದ್ದರು.
ಈ ವೇಳೆ ಪೊಲೀಸರು ಸಂಸದ ಪ್ರತಾಪ್ ಸಿಂಹ ಅವರ ಮನೆಯ ಮುಂಭಾಗಕ್ಕೆ ತೆರಳದಂತೆ ಮನೆಯ 500 ಮೀಟರ್ ಹಿಂಭಾಗದ ರಿಂಗ್ ರಸ್ತೆಯ ಕನ್ನಡ ವೃತ್ತದಲ್ಲೇ ಬ್ಯಾರಿಕೇಡ್ ಗಳನ್ನು ಅಡ್ಡಹಾಕಿ ತಡೆದರು.
ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸಂಘಪರಿವಾರ ಮತ್ತು ಬಿಜೆಪಿ ನಾಯಕರುಗಳು ಮುಸ್ಲಿಮ್ ವರ್ತಕರುಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ನಮ್ಮ ಹಳ್ಳಿಗಳು ಬಡಾವಣೆಗಳಿಗೆ ವ್ಯಾಪಾರಕ್ಕಾಗಿ ಬರುತ್ತಿದ್ದ ಮುಸ್ಲಿಮ್ ಬಂಧುಗಳ ಭಯದಿಂದ ಬರುತ್ತಿಲ್ಲ, ಇದರಿಂದ ನಮ್ಮ ಬಳಿ ಹಳೆ ಬಾಟಲ್, ಕಾಲಿ ಸೀಸ, ಹುಣಸೆ ಪಿಚ್ಚಿ, ಹಳೆ ಟಯರ್ ಟ್ಯೂಬ್ ಗಳು ಸಾಕಷ್ಟು ಉಳಿದುಕೊಂಡಿವೆ. ಅವುಗಳನ್ನು ಸಂಸದ ಪ್ರತಾಪ್ ಸಿಂಹ ಕೊಂಡುಕೊಂಡು ನಮಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News